ಇಂದಿನ ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿಯ ಟಾನಿಕ್ ಕುಡಿಸಬೇಕಿದೆ: ಹುರಳಿ ಬಸವರಾಜ್

ಸಂಜೆವಾಣಿ ವಾರ್ತೆ

ಸಂತೇಬೆನ್ನೂರು.ಆ.೩೧; ದೊಡ್ಡವರು ಸಾಹಿತ್ಯ ಓದಿದ್ದು ಸಾಕು, ಇಂದಿನ ಮಕ್ಕಳು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಂತರ್ಗತ ಮಾಡಿಕೊಳ್ಳಬೇಕಿದೆ ಎಂದು ಚಿತ್ರದುರ್ಗದ ಸಾಹಿತಿಗಳು, ನಿವೃತ್ತ ಮುಖ್ಯ ಶಿಕ್ಷಕರಾದ ಹುರಳಿ ಬಸವರಾಜ್ ಅಭಿಪ್ರಾಯ ಪಟ್ಟರು.ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಸತತ ಒಂಭತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ  ಮಾಸದ ಮಾತು ಸಾಹಿತ್ಯ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಂಪರೆ- ವಿಷಯವಾಗಿ ಉಪನ್ಯಾಸ ನೀಡಿದರು.ಕವಿರಾಜಮಾರ್ಗದಲ್ಲಿನ ಕನ್ನಡಿಗರ ವೀರೋದ್ಧಾತ ಗುಣಗಳಿಂದ ಹಿಡಿದು ನವೋದಯ, ನವ್ಯ ಕಾಲದವರೆಗಿನ ಜ್ಞಾನಾತ್ಮಕ ವಿಷಯಗಳಿಂದ ಇಂದಿನ ಯುವ ಪೀಳಿಗೆ ವಂಚಿತವಾಗುತ್ತಿವೆ. ಬಸವಣ್ಣನವರ ವಚನ, ಅಲ್ಲಮ ಪ್ರಭುಗಳ ದೈವೀಭಾವದ ಬೆಡಗಿನ ವಚನಗಳು , ಶರೀಫರ ತತ್ವಪದಗಳ ಸೊಗಸು, ದಾಸರ ಕೀರ್ತನೆಗಳ ಪಾಯಸ, ಕುಮಾರವ್ಯಾಸನ ಕರ್ನಾಟಕ ಭಾರತ ಕಥಾ ಮಂಜರಿಯ ವೀರರಸದ ಜೊತೆಯಲ್ಲಿ ಕುವೆಂಪು, ಬೇಂದ್ರೆ , ಮಾಸ್ತಿ, ಕಣವಿ, ನಿಸಾರರ ಕಥಾ- ಕಾವ್ಯ ಜಗತ್ತಿನಲ್ಲಿ ವಿದ್ಯಾರ್ಥಿ ಸಮೂಹ ಮೀಯಬೇಕು ಎಂದರು.ಮೊಬೈಲ್ ಜಗತ್ತಿನಲ್ಲಿ ಕಳೆದು ಹೋಗುವ ಮಕ್ಕಳಿಗೆ ಗುರು ಹಿರಿಯರ ಗೌರವಿಸುವ ವ್ಯವಧಾನ ಇಂದು ಕಣ್ಮರೆಯಾಗಿದೆ. ಎಲ್ಲರನ್ನೂ  , ಎಲ್ಲವನ್ನೂ ಉಡಾಫೆಯಿಂದ ಕಾಣುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಓದಿನ ವ್ಯಾಪ್ತಿ ಇಲ್ಲದ್ದು ಹಾಗೂ ಸಾಹಿತ್ಯ ಅಧ್ಯಯನದ ಕೊರತೆ ಎಂದರು.ಶ್ರೀಮತಿ ಲತಾ ಉಲ್ಲಾಸ್ ಮತ್ತು ಮಾರುತಿ ಭಾವಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರುಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಕೆ.ಎಸ್ ಮಹೇಶ್ವರಪ್ಪ ಅವರಿಗೆ ಮಾಸದ ಮಾತು ಬಳಗದಿಂದ ಸನ್ಮಾನ ಮಾಡಲಾಯಿತು.ಚಿತ್ರದುರ್ಗದ ಸಾಹಿತಿಗಳಾದ  ಪರಮೇಶ್ವರಪ್ಪ ಕುದರಿ ಹಾಗೂ ಎಂ.ಮೃತ್ಯುಂಜಯಪ್ಪ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.ಸಂತೆಬೆನ್ನೂರು ಗ್ರಾಮದ ಕವಿ, ಕತೆಗಾರ ಫೈಜ್ನಟ್ರಾಜ್ ಅವರು ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದರು.  ಸಿದ್ದಿಖ್ ಅಹಮದ್, ಫ್ರೇಂ ಮಧು , ಗಿರೀಶ್ ಮತ್ತೇರ , ಮುದಿಯಪ್ಪರ ಶಿವು, ಅಬ್ದುಲ್ ವಾಹಿದ್, ಸಿ.ಪಿ ಅನಿತಾ ,ಇಂದ್ರಜಿತ್ ಶಾಂತರಾಜ್, ಮಹೇಶ್ವರಪ್ಪ, ನಾಗೇಂದ್ರಪ್ಪ ಮುಂತಾದವರು ಹಾಜರಿದ್ದರು.ಕು. ವಿದ್ಯಾ ಮತ್ತು ಕು. ಪ್ರಿಯಾಂಕ ಕಾರ್ಯಕ್ರಮ ನಿರೂಪಣೆ ಮಾಡಿದರು