ಇಂದಿನ ಮಕ್ಕಳಿಗೆ ನೈತಿಕ ಶಿಕ್ಷಣ ಬಹಳ ಅಗತ್ಯ : ಡಾ. ಮಹಾಂತ ಸ್ವಾಮೀಜಿ

ಅಥಣಿ : ಜೂ.26:ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು, ಅವರಲ್ಲಿ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡುವುದು ಅಗತ್ಯ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣವನ್ನು ಅಳವಡಿಸಿದಾಗ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಶೇಗುಣಸಿಯ ವಿರಕ್ತ ಮಠದ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿಂದು ಆದಿ ಬಣಜಿಗ ಯುವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 6ನೇ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ಇಂದಿನ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಕೇವಲ ಅಂಕ ಗಳಿಕೆಯ ಸಾಧನೆಯನ್ನು ಮಾತ್ರ ಕಲಿಸುತ್ತಿದ್ದಾರೆ. ಉತ್ತಮ ಶಿಕ್ಷಣ ಜೊತೆಗೆ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಕೊಡುವುದು ಅಗತ್ಯವಾಗಿದೆ. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿ ಉತ್ತಮ ಸಾಧಕನಾಗಿ ಬೆಳೆಯುತ್ತಾನೆ. ಸಾಧನೆ ಸುಲಭವಾಗಿ ದೊರಕುವುದಿಲ್ಲ, ಅದಕ್ಕೆ ಶ್ರದ್ಧೆ ಮತ್ತು ಪರಿಶ್ರಮ ಬಹಳ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಉನ್ನತ ಗುರಿಯನ್ನು ಇಟ್ಟುಕೊಂಡು ಅದರ ಸಾಧನೆಗಾಗಿ ಸತತ ಪರಿಶ್ರಮ ಪಟ್ಟರೆ ಎಂತಹ ಸಾಧನೆಯು ಸುಲಭವಾಗುತ್ತದೆ. ಸಾಧನೆ ಮಾಡಿ ಬೆಳೆದ ನಂತರ ತಂದೆ ತಾಯಿ, ಗುರುಗಳಿಗೆ ಮತ್ತು ಸಮಾಜಕ್ಕೆ ಋಣಿಯಾಗಿ ಸೇವೆ ಸಲ್ಲಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶೆಟ್ಟರ ಮಠದ ಮರುಳಸಿದ್ದ ಸ್ವಾಮಿಜಿ ಮಾತನಾಡಿ ಆದಿ ಬಣಜಿಗ ಯುವ ವೇದಿಕೆಯ ಮುಖಂಡರು ಸಮುದಾಯದ ಮಕ್ಕಳ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ. ಅವರ ಮುಂದಿನ ಶೈಕ್ಷಣಿಕ ಜೀವನಕ್ಕೆ ಮತ್ತಷ್ಟು ಸ್ಪೂರ್ತಿ ತುಂಬಲಿದೆ ಎಂದು ಹೇಳಿದ ಅವರು ವಿದ್ಯಾರ್ಥಿಗಳು ಇಂದು ಮೊಬೈಲ್ ಮತ್ತು ಟಿವಿಗಳಿಂದ ದೂರವಿದ್ದು ಪರಿಶ್ರಮದಿಂದ ಓದಬೇಕು. ಉತ್ತಮ ಸಾಧನೆ ಮಾಡಿದಾಗ ಸಮಾಜ ನಿಮ್ಮನ್ನು ಗೌರವಿಸುತ್ತದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಸಮುದಾಯದ ಅನೇಕ ಸಮಾಜ ಸೇವಕರಿಗೆ, ಶಿಕ್ಷಕರಿಗೆ, ಕಲಾವಿದರಿಗೆ, ದಾನಿಗಳಿಗೆ ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ಆದಿ ಬಣಜಿಗ ಸಮುದಾಯದ ಎರಡನೇ ವರ್ಷದ ವಧು ವರರನ್ನ ವೇದಿಕೆಯಲ್ಲಿ ಪರಿಚಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ಆದಿ ಬಣಜಿಗ ಸಮುದಾಯದ ಮುಖಂಡರಾದ ಚಂದ್ರಶೇಖರ ಬಳ್ಳೊಳ್ಳಿ, ಸಿ ಎಸ್ ನೇಮಗೌಡ, ಮಲ್ಲಪ್ಪ ಝರೆ, ಎ.ಎಸ್ ತೆಲಸಂಗ, ರಾಜು ಆಲಬಾಳ, ಮಲ್ಲಪ್ಪ ಡಂಗಿ, ರಾಜು ಮರಡಿ, ಬಸು ಮಾದಗುಡಿ, ಅಶೋಕ ಮಾರಾಪುರ, ಕುಮಾರ ವಣಜೋಳ, ಸತೀಶ ಪಾಟೀಲ ಸೇರಿದಂತೆ ಅನಿಕ ಮುಖಂಡರು ಉಪಸ್ಥಿತರಿದ್ದರು. ಸುರೇಶ ಬಳ್ಳೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ವಿಜಯ ಹುದ್ದಾರ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ತೋರಿ ವಂದಿಸಿದರು.