ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ

ಚಾಮರಾಜನಗರ, ಏ.01- ಕೋವಿಡ್ ರೋಗ ನಿರೋಧಕ ಶಕ್ತಿ ಒದಗಿಸುವ ಕೋವಿಡ್ ಲಸಿಕೆಯನ್ನು ಜಿಲ್ಲೆಯಲ್ಲಿ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಉಚಿತವಾಗಿ ನೀಡಲಿದ್ದು ಜಿಲ್ಲೆಯ ಜನತೆ ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಮಾತ್ರ ಈಗಾಗಲೇ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುತ್ತಿತ್ತು. ಕೇಂದ್ರದ ನಿರ್ದೇಶನದಂತೆ ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಜಿಲ್ಲೆಯ ನಾಗರಿಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕೆಂದು ಜಿಲ್ಲಾಧಿಕಾರಿ ಕೋರಿದರು.
ಜಿಲ್ಲೆಯಲ್ಲಿ ಇದುವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಲಸಿಕೆ ನೀಡಲಾಗುತ್ತಿತ್ತು. ಇನ್ನು ಮುಂದೆ ಆರೋಗ್ಯ ಉಪ ಕೇಂದ್ರಗಳಲ್ಲಿಯೂ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ. ಚಾಮರಾಜನಗರ ಜಿಲ್ಲೆಯ ಒಟ್ಟು 14 ಆರೋಗ್ಯ ಉಪ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಕೊಡಲಾಗುತ್ತದೆ. ಚಾಮರಾಜನಗರ ತಾಲೂಕಿನ ಗೂಳಿಪುರ, ಸಾಗಡೆ, ಮಲೆಯೂರು, ಬಾಗಳಿ, ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ, ಮಂಚಳ್ಳಿ, ರಾಘವಾಪುರ, ದೇಪಾಪುರ, ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ, ಸಿಂಗಾನಲ್ಲೂರು, ಹನೂರು ತಾಲೂಕಿನ ಅಜ್ಜೀಪುರ, ಕುರಟ್ಟಿಹೊಸೂರು, ಯಳಂದೂರು ತಾಲೂಕಿನ ಯರಗಂಬಳ್ಳಿ, ಮದ್ದೂರಿನಲ್ಲಿರುವ ಆರೋಗ್ಯ ಉಪಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆ ಹಾಗೂ ಎರಡು ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಒಟ್ಟು 83 ಕೇಂದ್ರಗಳಲ್ಲಿ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯಲು ಎಲ್ಲಾ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೇಂದ್ರಗಳಲ್ಲಿ ಆರ್.ಬಿ.ಎಸ್ ವೈದ್ಯರನ್ನು ನಿಯೋಜಿಸಲಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ, ಗುರುವಾರ ಹಾಗೂ ಭಾನುವಾರದ ರಜಾ ದಿನಗಳಂದು ಕೋವಿಡ್ ಲಸಿಕೆ ನೀಡಲಾಗುವುದಿಲ್ಲ. ಕಾರಣ ಮಂಗಳವಾರ, ಗುರುವಾರ ಮಕ್ಕಳಿಗೆ ಎಂದಿನಂತೆ ನೀಡಲಾಗುವ ರೋಗ ನಿರೋಧಕ ಲಸಿಕೆ ಕಾರ್ಯಕ್ರಮವಿರುತ್ತದೆ. ಆದರೆ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ವಾರದ ಎಲ್ಲಾ ದಿನಗಳಲ್ಲೂ ಕೋವಿಡ್ ಲಸಿಕೆಯನ್ನು ನೀಡಲಾಗುತ್ತದೆ. ಜಿಲ್ಲೆಯ ಜನತೆ ಆಧಾರ್ ಕಾರ್ಡ್ ಹಾಜರುಪಡಿಸಿ ಕೋವಿಡ್ ಲಸಿಕೆ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ 2,87,149 ಜನರು 45 ವರ್ಷ ಮೇಲ್ಪಟ್ಟವರಾಗಿದ್ದಾರೆ. ಪ್ರತಿ ನಿತ್ಯ ಕನಿಷ್ಠ ಅಂದಾಜು 5 ರಿಂದ 6 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಲಸಿಕೆ ವಿತರಣೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಜಿಲ್ಲೆಯಲ್ಲಿ ಇದುವರೆಗೆ ಲಸಿಕೆ ಪಡೆದವರಲ್ಲಿ ಯಾರಿಗೂ ಅಡ್ಡ ಪರಿಣಾಮ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯ ಜನರು ಕೋವಿಡ್ ನಿಯಂತ್ರಣಕ್ಕಾಗಿ ಸಹಕರಿಸಬೇಕು. ಕೋವಿಡ್ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಹಿರಿಯ ವೈದ್ಯಾಧಿಕಾರಿ ಡಾ. ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.