ಇಂದಿನಿಂದ ಸರಕು ಸಾಗಣೆ ಸ್ಥಗಿತ

ದಾವಣಗೆರೆ.ಮೇ.೫: ಪೊಲೀಸರ ಕಿರುಕುಳ ಹಾಗೂ ಅಗತ್ಯ ಸೇವೆಗಳ ಕೊರತೆ ಹಿನ್ನೆಲೆಯಲ್ಲಿ ಇಂದಿನಿಂದ ಎಲ್ಲಾ ರೀತಿಯ ಸರಕು ಸಾಗಣೆ ಸ್ಥಗಿತಗೊಳಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್ಪೋರ್ಟ್ ಏಜೆಂಟರ ಸಂಘ ತಿಳಿಸಿದೆ. ರಾಜ್ಯ ಸರ್ಕಾರ ಲಾಕ್‌ಡೌನ್ ಸಮಯದಲ್ಲಿ ಕೃಷಿ ಚಟುವಟಿಕೆ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಅಗತ್ಯ ವಸ್ತುಗಳ ಸಾಗಣೆಗೆ ಅನುಮತಿಸಿದೆ. ಆದರೂ ಸರಕು ಸಾಗಣೆ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ಮತ್ತು ಹೊರ ಜಿಲ್ಲೆಯಲ್ಲಿ ಪೊಲೀಸರು ತಪಾಸಣೆ ನೆಪದಲ್ಲಿ ಲಾರಿ ಚಾಲಕರು ಹಾಗೂ ಮಾಲೀಕರಿಗೆ ಕಿರುಕುಳ ನೀಡುವುದು ಮಾತ್ರ ತಪ್ಪಿಲ್ಲ. ಕೇಂದ್ರ ಸರ್ಕಾರದ ಆದೇಶದಂತೆ ಜೂನ್. 30 ರವರಿಗೆ ಯಾವುದೇ ರೀತಿಯ ವಾಹನದ ದಾಖಲೆ ತಪಾಸಣೆ ಮಾಡುವಂತಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿದರೂ, ಪೊಲೀಸರು 200, 500, 1000 ರೂ.ಗಳ ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಆರೋಪಿಸಿದ್ದಾರೆ. ಲಾರಿಯವರು ತಮ್ಮ ಜೀವವನ್ನು ಪಣಕ್ಕಿಟ್ಟು ಸರಕು ಸಾಗಣೆ ಮಾಡುತ್ತಾರೆ. ಹೀಗಿರುವಾಗ ಲಾರಿಗಳು ದುರಸ್ತಿಗೆ ಬಂದರೆ ಎಲ್ಲೂ ಕೂಡ ಪಂಚರ ಶಾಪ್, ಆಟೋಮೊಬೈಲ್, ಗ್ಯಾರೇಜ್ ತೆರೆದಿರುವುದಿಲ್ಲ. ಲಾರಿಗಳ ಓಡಾಟಕ್ಕೆ ಅಗತ್ಯವಾಗಿರುವ ಇಂತಹ ಸೇವೆಗಳಿಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಇಂದಿನಿಂದ ಸರಕು ಸಾಗಣೆ ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.