ಇಂದಿನಿಂದ ಶೈಕ್ಷಣಿಕ ವರ್ಷ ಆರಂಭ. ಕೊಠಡಿ, ಶಿಕ್ಷಕರ ಕೊರತೆ ಮಧ್ಯೆ ಶಾಲಾರಂಭಕ್ಕೆ ಸಿದ್ದತೆ.

ಹರಪನಹಳ್ಳಿ.ಮೇ.೨೯; ಬೇಸಿಗೆ ರಜೆ  ಕಳೆದು, ಶೈಕ್ಷಣಿಕ ವರ್ಷ ಆರಂಭವಾಗಿದೆ ಜೊತೆಯಾಗಿ  ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದು, ಮುಂದೆಯೂ  ಮಳೆ ಬೀಳುವ ಸೂಚನೆಗಳನ್ನು ಹವಾಮಾನ ಇಲಾಖೆಯವರು ನೀಡಿದ್ದಾರೆ, ಇಂತಹ ಸಂದರ್ಭದಲ್ಲಿ ತಾಲೂಕಿನಲ್ಲಿ 794 ಶಿಥಿಲ ಕೊಠಡಿಗಳ ಹಾಗೂ 300 ಶಿಕ್ಷಕರ ಕೊರತೆ ಮದ್ಯೆ ಶಾಲಾ ಶಿಕ್ಷಣ ಇಲಾಖೆ ಶಾಲಾರಂಭಕ್ಕೆ ಸಕಲ ಸಿದ್ದತೆಗೆ ಮುಂದಾಗಿದೆ.ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಹಾಗೂ ಮುರಾರ್ಜಿ ಶಾಲೆಗಳು ಸೇರಿ ಒಟ್ಟು 290 ಸರ್ಕಾರಿ ಶಾಲೆಗಳು ಇವೆ.34568 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ.ಈ ಶಾಲೆಗಳಲ್ಲಿ 1815 ಒಟ್ಟು ಶಾಲಾ ಕೊಠಡಿಗಳು ಇವೆ, ಅದರಲ್ಲಿ 373 ಕೊಠಡಿಗಳನ್ನು ನೆಲಸಮ ಮಾಡಿಕಟ್ಟಬೇಕಾಗಿದೆ, ಅಷ್ಟು ಶಿಥಿಲ ಗೊಂಡಿವೆ, 421 ಕೊಠಡಿಗಳು ದುರಸ್ತಿಗೊಳ್ಳಬೇಕಾಗಿದೆ.ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ರವರು ಜಯಗಳಿಸಿದ ಒಂದು ವರ್ಷದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅಡಿ 57 ಶಾಲೆಗಳ ಮೇಲ್ಚಾವಣೆ ಮೇಲೆ ಕಬ್ಬಿಣದ ಶೀಟ್​ಗಳನ್ನು ಹಾಕಿ ಸೋರುವುದನ್ನು ತಪ್ಪಿಸಲಾಗಿದೆ. ಇನ್ನೂ 100 ಶಾಲೆಗಳ ಕಟ್ಟಡಗಳ ದುರಸ್ಥಿ ಕಾರ್ಯಕ್ಕೆ ಕ್ರಿಯಾಯೋಜನೆಗೆ ಒಪ್ಪಿಗೆ ದೊರೆತು ಶೀಘ್ರ ಕೆಲಸ ಆರಂಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಹೆಚ್ಚಿನ ಕೊಠಡಿಗಳು ದುರಸ್ತಿಗಾಗಿ ಕಾಯುತ್ತಿವೆ, ಇನ್ನೂ ಕೆಆರ್​ಐಡಿಎಲ್​ಏಜನ್ಸಿ ಯಿಂದ ಕಾಮಗಾರಿ ಅಪೂರ್ಣ ಗೊಂಡು ಸ್ಥಗಿತಗೊಂಡೇ 2-3 ವರ್ಷಗಳೇ ಕಳೆದಿವೆ, ಇನ್ನೂ ಆರಂಭಗೊಂಡಿಲ್ಲ.300 ಶಿಕ್ಷಕರ ಕೊರತೆ – ಶಾಲಾ ಕೊಠಡಿಗಳ ಪರಿಸ್ಥಿತಿ ಈ ರೀತಿಯಾದರೆ ಇನ್ನೂತಾ ಲೂಕಿನಲ್ಲಿ ಅಂದಾಜು 300 ಶಿಕ್ಷಕರ ಕೊರತೆ ಇದೆ, ಮೆ.31 ರಿಂದ ಶಾಲೆಗೆ ಮಕ್ಕಳನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಶಿಕ್ಷಕರು ಅದ್ದೂರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಆದರೂ ಈವರೆಗೂ ಅತಿಥಿ ಶಿಕ್ಷಕರ ನೇಮಕದ ಬಗ್ಗೆ ಸರ್ಕಾರ ಪ್ರಕ್ರಿಯೆ ಪ್ರಾರಂಭಿಸಿಲ್ಲ.ಈ ಬಾರಿ ತಾಲೂಕಿನ 23 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್​ಕೆಜಿ, ಯು ಕೆಜಿ ಹಾಗು 1ನೇ ತರಗತಿಗಳಿಗೆ ಆಂಗ್ಲ ಮಾದ್ಯಮ ಪ್ರಾರಂಭಮಾಡಲಾಗುತ್ತಿದೆ.10 ಸರ್ಕಾರಿ ಪ್ರೌಢ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಹಿಂದಿ ವಿಷಯದ ಬದಲಾಗಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ್ಯ ಚೌಕಟ್ಟು ಕೋರ್ಸ (ಎನ್​ಎಸ್​ಕ್ಯೂಎಪ್) ಆರಂಭಿಸಲಾಗುತ್ತಿದ್ದು, ಇದರಲ್ಲಿ 10 ವಿಷಯಗಳು ಬರುತ್ತವೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.ಬಿಸಿಯೂಟ, ಹಾಲು, ಮೊಟ್ಟೆ ಕೊಡುವುದರಿಂದ ಬಡ ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುವುದು ಸರಿ, ಆದರೆ ಅದರ ಜೊತೆ ಶೈಕ್ಷಣಿಕ ಪ್ರಗತಿಯಾಗಬೇಕಾದರೆ ಕೊಠಡಿಗಳ ದುರಸ್ತಿ, ಅತಿಥಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.