ಇಂದಿನಿಂದ ಬೊಮ್ಮಾಯಿ ರಾಜ್ಯಬಾರ

ಬೆಂಗಳೂರು,ಜು.೨೮- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇಂದು ಪದಗ್ರಹಣ ಮಾಡಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ರಾಜ್ಯದ ೨೩ನೇ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯ ಬಿಜೆಪಿಯಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ನಿನ್ನೆ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು.
ರಾಜಭವನದಲ್ಲಿ ಇಂದು ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ ಶುಭಲಗ್ನದಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರದ ವೀಕ್ಷಕರುಗಳಾದ ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್, ಡಿ.ಕೆ ಅರುಣಾ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರು, ಮಾಜಿ ಸಚಿವರುಗಳು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ದೇವಸ್ಥಾನ ಭೇಟಿ
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಅವರು ಬಾಲಬ್ರುಹಿ ಅತಿಥಿಗೃಹದ ಬಳಿ ಇರುವ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಜಿ ಮುಖ್ಯಮ
ಂತ್ರಿ ಯಡಿಯೂರಪ್ಪ ಅವರ ಆರ್ಶೀವಾದ ಪಡೆದುಕೊಂಡರು. ಬಳಿಕ ಕುಮಾರ ಕೃಪ ಅತಿಥಿ ಗೃಹಕ್ಕೆ ತೆರಳಿ ಅಲ್ಲಿ ಕೇಂದ್ರ ವೀಕ್ಷಕರಾದ ಧಮೇಂದ್ರ ಪ್ರಧಾನ್,ಅರುಣ್ ಸಿಂಗ್ ಇವರುಗಳನ್ನು ಭೇಟಿ ಮಾಡಿ ಅವರ ಜತೆಯೇ ರಾಜಭವನಕ್ಕೆ ಆಗಮಿಸಿದರು.
ಮಿತಿಮೀರಿದ ಜೈಕಾರ ಘೋಷಣೆ
ರಾಜಭವನದ ಹೊರಗಡೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಸಂಖ್ಯೆಯಲ್ಲಿ ಸೇರಿದ್ದು, ಕಾರ್ಯಕರ್ತರ ಉತ್ಸಾಹ ಹುಮ್ಮಸ್ಸು ಮುಗಿಲು ಮುಟ್ಟಿತು. ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪರ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಆಹ್ವಾನಿತರಿಗಷ್ಟೇ ರಾಜಭವನದ ಒಳಗಡೆ ಪ್ರವೇಶಕ್ಕೆ ಅವಕಾಶವಿತ್ತು. ಹಾಗಾಗಿ ಹೊರಗಡೆಯೇ ಕಾರ್ಯಕರ್ತರು,ಅಭಿಮಾನಿಗಳು ಜೈಕಾರಗಳನ್ನು ಹಾಕುತ್ತಿದ್ದರು.
ಬಿಗಿ ಬಂದೋಬಸ್ತ್
ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ನಡೆದ ಸುತ್ತ ರಾಜಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬರನ್ನು ತಪಾಸಣೆ ಮಾಡಿಯೇ ಒಳ ಬಿಡಲಾಗುತ್ತಿತ್ತು. ಪಾಸ್ ಇದ್ದವರಿಗೆ ಮಾತ್ರ ರಾಜಭವನದ ಒಳಗಡೆ ಪ್ರವೇಶನೀಡಲಾಯಿತು.