ಇಂದಿನಿಂದ ಪವಿತ್ರ ಪುಷ್ಕರ – ಮಂತ್ರಾಲಯದಲ್ಲಿ ಪೂಜೆ

ತುಂಗಭದ್ರಾ : ಮುಕ್ಕೋಟಿ ದೇವತೆಗಳ ಸಂಗಮ – ಶ್ರೀಗಳು
ರಾಯಚೂರು.ನ.20- ತುಂಗಭದ್ರಾ ನದಿಗೆ ಪವಿತ್ರ ಪುಷ್ಕರ ಸಂಭವಿಸಿತ್ತು, ಈ ಪವಿತ್ರ ಜಲದಲ್ಲಿ ಮೂರುವರೆ ಕೋಟಿ ದೇವಾನುದೇವತೆಗಳು ಸನ್ನಿವೇಶದ ಪರ್ವ ಅತ್ಯಂತ ಪವಿತ್ರವಾಗಿದ್ದು, ಯಾರು ಈ ನದಿಯಲ್ಲಿ ಪುಣ್ಯ ಪೂಜೆ ನಡೆಸುವರೇ, ಎಲ್ಲಾ ಸಂಕಲ್ಪ ಈಡೇರಲಿದೆಂದು ಮಂತ್ರಾಲಯ ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
ಇಂದಿನಿಂದ ಒಂದು ವರ್ಷ ಕಾಲ ತುಂಗಭದ್ರಾ ನದಿಯ ಪುಷ್ಕರ ಪರ್ವಕಾಲದ ನಿಮಿತ್ಯ ನದಿಗೆ ಪವಿತ್ರ ಪೂಜಾ ಸಂಕಲ್ಪವನ್ನು ಪೀಠಾಧಿಪತಿಗಳು ನೆರವೇರಿಸಿದರು. ಮಂತ್ರಾಲಯದ ರಾಯರ ಸನ್ನಿಧಿಯಿಂದ ಶ್ರೀ ಗುರು ರಾಯರ ಉತ್ಸವ ಮೂರ್ತಿ ಭವ್ಯ ಮೆರವಣಿಗೆಯೊಂದಿಗೆ ನದಿಯ ತೀರಕ್ಕೆ ತೆರಳಿ ಪುಷ್ಕರ ಪೂಜಾ ನೆರವೇರಿಸಿದರು. ಈ ಪೂರ್ವ ಆಶೀರ್ವಚನ ನೀಡುತ್ತಾ, ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಜನ ಸಾಕಷ್ಟು ತೊಂದರೆಗೆ ಗುರಿಯಾಗಿದ್ದಾರೆ. ಈ ಕೊರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಅತ್ಯಂತ ಸಮರ್ಥವಾಗಿ ಹೋರಾಟ ನಡೆಸಿದ್ದು, ಕೊರೊನಾದಿಂದ ಹೆಚ್ಚಿನ ತೊಂದರೆಯಾಗದಂತೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.
ಇಂತಹ ಸಂದರ್ಭದಲ್ಲಿ ಈ ಪುಷ್ಕರ ಪರ್ವ ಪ್ರಮುಖವಾಗಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಯಮಗಳ್ವಯ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ತುಂಗಭದ್ರಾ ಪುಷ್ಕರ ಪವಿತ್ರ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರ್ಕಾರ ಮತ್ತು ಆಂಧ್ರ ಸರ್ಕಾರಗಳು ಹಾಗೂ ಸ್ಥಳೀಯ ಅಧಿಕಾರಿಗಳು ಎಲ್ಲಾ ರೀತಿಯ ಸಹಕಾರದೊಂದಿಗೆ ಈ ಪವಿತ್ರ ಪುಷ್ಕರವನ್ನು ಅತ್ಯಂತ ನಿಯಮಬದ್ಧವಾಗಿ ನಡೆಸಲಾಗುತ್ತದೆ. ರಾಯರ ಭಕ್ತರು ತಮ್ಮ ಎಲ್ಲಾ ಮನೋ ಇಚ್ಛೆ ಪುಷ್ಕರ ಪರ್ವದ ನದಿ ಪೂಜೆ ನೆರವೇರಿಸಿದರೆ, ಮುಂಬರುವ ದಿನಗಳಲ್ಲಿ ಅವರ ಜೀವನ ಉತ್ತಮಗೊಳ್ಳಲಿದೆಂದು ಆಶೀರ್ವಚನ ನೀಡಿದರು.
ಪೂರ್ಣಕುಂಭ ರಾಯರ ಬೃಂದಾವನಕ್ಕೆ ಸಮರ್ಪಿಸಿ, ಪೂಜಾ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಮೆರವಣಿಗೆಯೊಂದಿಗೆ ನದಿಗೆ ತೆರಳಲಾಯಿತು. ನದಿಯಲ್ಲಿ ಪೀಠಾಧಿಪತಿಗಳು ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯ ನೆರವೇರಿಸಿದರು. ನಂತರ ಪ್ರಥಮ ಪುಣ್ಯಸ್ನಾನ ಶ್ರೀಗಳು ನಿರ್ವಹಿಸಿದರು. ಮಂತ್ರಘೋಶಗಳೊಂದಿಗೆ ತುಂಗಭದ್ರೆಯಲ್ಲಿ ಮಿಂದೆದ್ದ ಶ್ರೀಗಳು ಪುಷ್ಕರ ಪುಣ್ಯ ಸ್ನಾನಕ್ಕೆ ಚಾಲನೆ ನೀಡಿದರು. ಅವರೊಂದಿಗೆ ನಿರ್ಬಂಧಿತ ಅವರ ಭಕ್ತರು ನದಿಯಲ್ಲಿ ಪುಣ್ಯ ಸ್ನಾನದಲ್ಲಿ ಮಿಂದೆದ್ದರು.
ಕೊರೊನಾ ಹಿನ್ನೆಲೆಯಲ್ಲಿ ಪ್ರಥಮ ದಿನದ ಪುಣ್ಯ ಸ್ನಾನ ಅತ್ಯಂತ ಕಟ್ಟುನಿಟ್ಟಿನಿಂದ ನಿರ್ವಹಿಸಲಾಯಿತು. ಕೊರೊನಾ ಹರಡದಂತೆ ಮತ್ತು ನಿಯಂತ್ರಣಕ್ಕೆ ಬೇಕಾದ ಎಲ್ಲಾ ಮುಂಜಾಗ್ರತೆಗಳೊಂದಿಗೆ ಈ ಪೂಜಾ ಕಾರ್ಯ ಕೈಗೊಳ್ಳಲಾಯಿತು. ಸರ್ಕಾರದ ನಿಯಮಗಳ ಹಿನ್ನೆಲೆಯಲ್ಲಿ ಪೀಠಾಧಿಪತಿಗಳು ಕಡ್ಡಾಯ ಮಾಸ್ಕ್ ಧರಿಸುವುದರೊಂದಿಗೆ ತಮ್ಮ ಎಲ್ಲಾ ಭಕ್ತರು ಮತ್ತು ಅರ್ಚಕರು ಮಾಸ್ಕ್ ಧರಿಸುತ್ತಾ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು.