ಇಂದಿನಿಂದ ಏ.೧೯ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ

ರಾಯಚೂರು,ಏ.೧೧- ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದಿನಿಂದ ಏ.೧೯ ರವರೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರಗಳನ್ನು ಉಮೇದುದಾರರು ಅಥವಾ ಸೂಚಕರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಮಾ.೧೫ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಅಧಿಸೂಚನೆ ಹೊರಡಿಸಿದ್ದು, ಅದರಂತೆ ೦೬-ರಾಯಚೂರು (ಪರಿಶಿಷ್ಟ ಪಂಗಡ) ಲೋಕಸಭಾ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ಸಂಬಂಧಿಸಿದಂತೆ ನಾಮ ಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ೦೬-ರಾಯಚೂರು (ಪ.ಪಂ) ಲೋಕಸಭಾ ಕ್ಷೇತ್ರ ಚುನಾವಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ್ ರವರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ರವರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಏ.೧೨ರಿಂದ ಏ.೧೯ರ ವರೆಗೆ ಬೆಳಿಗ್ಗೆ ೧೧:೦೦ ರಿಂದ ಮದ್ಯಾಹ್ನ ೩:೦೦ ರ ನಡುವೆ ಯಾವುದೇ ದಿನದಂದು (ಸರ್ಕಾರಿ ರಜಾದಿನದ ಹೊರತು) ಸಲ್ಲಿಸಬಹುದಾಗಿದೆ.
ನಾಮ ಪತ್ರದ ನಮೂನೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗದಿತ ವೇಳೆಯಲ್ಲಿ ಪಡೆದುಕೊಳ್ಳಬಹುದು. ನಾಮ ಪತ್ರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಯಚೂರು ಇಲ್ಲಿ ಏ.೨೦ರ(ಶನಿವಾರ) ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳಿವಳಿಕೆ ಪತ್ರವನ್ನು ಉಮೇದುವಾರನು ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರನಿಂದ ಲಿಖಿತದಲ್ಲಿ ಅಧಿಕೃತನಾದ ಆತನ ಚುನಾವಣಾ ಏಜೆಂಟನು ಮೇಲ್ಕಂಡ (೨)ನೇಯ ಪ್ಯಾರಾದಲ್ಲಿ ನಿರ್ದಿಷ್ಟಪಡಿಸಿದ ಇಬ್ಬರಲ್ಲೊಬ್ಬ ಅಧಿಕಾರಿಗೆ ನಿಗಧಿ ಪಡಿಸಿದ ಕಛೇರಿಯಲ್ಲಿ ಏ.೨೨ ರ (ಸೋಮುವಾರ)ದಂದು ಮಧ್ಯಾಹ್ನ ೦೩:೦೦ ಗಂಟೆಗೆ ಮುಂಚೆ ಸಲ್ಲಿಸಬಹುದು.
ಚುನಾವಣೆಗೆ ಸ್ಪರ್ಧೆ ನಡೆದ ಸಂದರ್ಭದಲ್ಲಿ ಮೇ.೭(ಮಂಗಳವಾರ) ರಂದು ಬೆಳಿಗ್ಗೆ ೦೭:೦೦ ಗಂಟೆಯಿಂದ ಸಂಜೆ ೦೬:೦೦ ಗಂಟೆಯ ವರೆಗೆ ಮತದಾನ ನಡೆಯುವುದು ಎಂದು ಈ ಮೂಲಕ ತಿಳಿಸಲಾಗಿದೆ. ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಚುನಾವಣಾ ಆಯೋಗ ನೀಡಿರುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಬೇಕು.ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರವನ್ನು ನಮೂನೆ-೨ಎ ನಲ್ಲಿ ಸಲ್ಲಿಸಬೇಕು, ನಮೂನೆ-೨೬ರಲ್ಲಿ ರೂ.೧೦೦/- ಗಳ ಛಾಪಾ ಕಾಗದದಲ್ಲಿ ಅಭ್ಯರ್ಥಿಯ ಘೋಷಣಾ ಪತ್ರ, ಬೇಬಾಕಿಗೆ ಸಂಬಂಧಿಸಿದ ಇಲಾಖೆ ಹಾಗೂ ನೋಟರಿ ಪಬ್ಲಿಕ್ ರವರಿಂದ ದೃಢೀಕರಣ ಪತ್ರ ಸಲ್ಲಿಸಬೇಕು. ಸಾಮಾನ್ಯ ಅಭ್ಯರ್ಥಿಗಳು ರೂ.೨೫೦೦೦/- ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ರೂ.೧೨೫೦೦/- ಗಳ ಭದ್ರತಾ ಠೇವಣಿಯನ್ನು ನಿಗದಿಪಡಿಸಲಾಗಿರುತ್ತದೆ.
ರಾಷ್ಟ್ರೀಯ, ರಾಜ್ಯ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಗೆ ಒಬ್ಬ ಸೂಚಕರು, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷ, ಪಕ್ಷೇತರರು ೧೦ ಸೂಚಕರು ಸಹಿ ಮಾಡಿರಬೇಕು. ರಾಜಕೀಯ ಪಕ್ಷಗಳ ಅಭ್ಯರ್ಥಿಯಾಗಿದ್ದಲ್ಲಿ ಎ ಮತ್ತು ಬಿ ನಮೂನೆಯನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನ ೧೯ನೇ ಏಪ್ರೀಲ್-೨೦೨೪ರಂದು ಮಧ್ಯಾಹ್ನ ೦೩:೦೦ ಗಂಟೆಯ ಒಳಗಾಗಿ ನಾಮಪತ್ರವನ್ನು ಸಲ್ಲಿಸಬಹುದು ಹಾಗೂ ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ವಚನವನ್ನು ಸ್ವೀಕರಿಸಬೇಕು.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಜೊತೆಗೆ ೪ ಇತರ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ನಾಮಪತ್ರ ಸ್ವೀಕೃತಿ ಕೇಂದ್ರದಿಂದ ೧೦೦ ಮೀಟರ್ ಅಂತರದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಬೆಂಗಾವಲಿನ ೩ ವಾಹನಗಳಿಗೆ ಮಾತ್ರ ನಾಮಪತ್ರ ಸ್ವೀಕೃತಿ ಕೇಂದ್ರದಿಂದ ೧೦೦ ಮೀಟರ್ ಅಂತರದೊಳಗೆ ಪ್ರವೇಶಿಸಲು ಅವಕಾಶವಿರುತ್ತದೆ.
ನಾಮಪತ್ರ ಸ್ವೀಕೃತಿ ಕೇಂದ್ರದ ಒಳಗಡೆ, ಪ್ರವೇಶ ದ್ವಾರದಲ್ಲಿ, ನಿರ್ಗಮನ ದ್ವಾರದಲ್ಲಿ ಕಣ್ಗಾವಲಿಗೆ ೩೬೦ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾಮಪತ್ರ ಸ್ವೀಕೃತಿ ಕಾರ್ಯದ ಚಿತ್ರೀಕರಣ ಮಾಡಲು ವೀಡಿಯೋ ಕ್ಯಾಮೇರಾದೊಂದಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಚುನಾವಣಾ ಆಯೋಗದ ಮಾರ್ಗದರ್ಶಗಳನ್ವಯ ನಾಮಪತ್ರ ಸ್ವೀಕೃತಿ ಕಾರ್ಯಕ್ಕೆ ಅವಶ್ಯವಿರುವ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.