ಇಂದಿನಿಂದ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭಿಸಿ

ಗದಗ,ಏ1 : ಪ್ರತಿ ಗ್ರಾಮ ಪಂಚಾಯತಿಯಲ್ಲಿ ಏಪ್ರೀಲ್ 1 ರಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಅವರು ಪಿಡಿಒಗಳಿಗೆ ಸೂಚಿಸಿದರು.

ಗಜೇಂದ್ರಗಡ ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಆಧಾರ್ ಕಾರ್ಡ್ ಸಿಡಿಂಗ್ ಅಥೆಂಟಿಕೇಷನ್ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸುವಿಕೆ, ಎಸಿ ಮತ್ತು ಎಸ್ಟಿ ಪ್ರಮಾಣ ಹೆಚ್ಚಿಸುವ ಕುರಿತು ಕ್ರಮವಹಿಸಬೇಕು ಎಂದು ತಿಳಿಸಿದರು.

ಪ್ರಸಕ್ತ ಸಾಲಿನಿಂದ ಜಲ ಸಂಜೀವಿನಿ ಪರಿಕಲ್ಪನೆಯಡಿ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮಾಡುವುದು ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ನೈಸರ್ಗಿಕ ನಿರ್ವಹಣಾ ಉಪಚಾರದ ಬದು ನಿರ್ಮಾಣ, ಸರೋವರ, ಗ್ರಾಮೀಣಕೆರೆ ಹೂಳೆತ್ತುವ ಕಾಮಗಾರಿ, ಕೃಷಿ ಹೊಂಡ ನಿರ್ಮಾಣ, ಕೊಳವೆ ಭಾವಿ ಮರುಪೂರ್ಣ ಘಟಕ, ನಾಲಾ ಅಭಿವೃದ್ಧಿ ಅರಣ್ಯೀಕರಣ, ಗೋಕಟ್ಟೆ ನಿರ್ಮಾಣ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಸಾರ್ವಜನಿಕ ಸ್ಥಳಗಳ ಮತ್ತು ಸರಕಾರಿ ಕಚೇರಿಗಳಲ್ಲಿ ಪ್ಲೇಕ್ಸ್, ಬ್ಯಾನರ್‍ಗಳನ್ನು ತೆರವುಗೊಳಿಸಬೇಕು. ಗೋಡೆ ಮೇಲಿನ ಬರಹಗಳನ್ನು ರದ್ದುಗೊಳಿಸಿ ಚುನಾವಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಹಕಾಧಿಕಾರಿ ಕಿಶನ ಕಲಾಲ, ಸಹಾಯಕ ನಿರ್ಧೇಶಕ (ಗ್ರಾ.ಉ.) ವಾಸುದೇವ ಪೂಜಾರ, ಸಹಾಯಕ ನಿರ್ಧೇಶಕ (ಪಂ.ರಾ.) ಬಸವರಾಜ ಬಡಿಗೇರ್, ಪಿಡಿಗಳು ನರೇಗಾ ಸಿಬ್ಬಂದಿಗಳು ಹಾಜರಿದ್ದರು.