ಇಂದಿಗೂ ಅಸ್ತಿತ್ವದಲ್ಲಿ ಜಾನಪದ-ತಿಮ್ಮೇಗೌಡ

ರಾಮನಗರ.ಮಾ೨೯:ತಂತ್ರಜ್ಞಾನದ ಯುಗದಲ್ಲಿ ಜಾನಪದ ಕಲೆಗಳು ಅಸ್ತಿತ್ವ ಉಳಿಸಿಕೊಂಡಿರುವುದು ಅದರ ಗಟ್ಟಿತನಕ್ಕೆ ಸಾಕ್ಷಿ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದರು.
ಇಲ್ಲಿನ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ಸಂಭ್ರಮ ಸಂಸ್ಥೆ ಸಂಸ್ಕೃತಿ ಮಂತ್ರಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತಿನ ಸಹಕಾರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕರ್ನಾಟಕ ಕಲಾ ಸಂಭ್ರಮ-೨೧ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ಶತಮಾನಗಳ ಇತಿಹಾಸವಿರುವ ಜಾನಪದಕ್ಕೆ ಅಳಿವಿಲ್ಲ. ಜಾನಪದ ಯಾವುದೇ ಒಂದು ಸಮುದಾಯಕ್ಕೆ ಮೀಸಲಾಗಿಲ್ಲ. ಕಲಾವಿದರ ಹಾಡಿನಿಂದ, ನೃತ್ಯದಿಂದ ಜಾನಪದ ಶ್ರೀಮಂತಗೊಳ್ಳುತ್ತದೆ. ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜಾನಪದ ಲೋಕದಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಹಿರಿಯ ಜಾನಪದ ವಿದ್ವಾಂಸ ಡಾ.ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ ಜಾನಪದ ಸಾಹಿತ್ಯ, ಸಂಸ್ಕೃತಿಗೆ ಆದ್ಯತೆ ನೀಡಬೇಕು. ನಮ್ಮೂರ ಕೆರೆ, ನಮ್ಮೂರ ತೋಪು, ನಮ್ಮೂರ ಮಣ್ಣು ಎಂಬ ಭಾವನೆ ಮೂಡಬೇಕು. ಭೂಮಿ, ನೀರು, ಗಾಳಿ ಮಲಿನಗೊಳ್ಳುತ್ತಿದೆ, ಅಂತರ್ಜಲ ಕುಸಿಯುತ್ತಿದೆ. ಇಡೀ ವಾತಾವರಣ ಏರುಪೇರು ಆಗುತ್ತಿದ್ದು, ಪ್ರಾಣಿ ಸಂಕುಲದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್ಸಿಎಸ್ಟಿ ಮಾಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಚಲುವರಾಜು ಮಾತನಾಡಿ ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಮೂಲ್ಯವಾದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಸನ ರಘು ಮಾತನಾಡಿ ಜಾನಪದ ಲೋಕದಲ್ಲಿ ಸ್ಥಳೀಯ ಜನಪದ ಕಲೆಗಳ ಪ್ರದರ್ಶನದ ಜೊತೆಗೆ ಇತರೆ ರಾಜ್ಯಗಳ ಜನಪದ ಕಲೆಗಳ ಪ್ರಕಾರಗಳನ್ನು ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ತಿಳಿಸಿದರು.
ಸಂಭ್ರಮ ಸಂಸ್ಥೆಯ ಕಾರ್ಯದರ್ಶಿ ಜೋಗಿಲ ಸಿದ್ದರಾಜು ಮಾತನಾಡಿ ಸಂಭ್ರಮ ಸಂಸ್ಥೆಯು ಕಲೆಗಳನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಹಳೆ ಬೇರು ಹೊಸ ಚಿಗುರು ಎಂಬಂತೆ ಎಲ್ಲಾ ತಲೆಮಾರಿನ ಕಲಾವಿದರಿಗೂ ತಮ್ಮ ಕಲೆಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿವಿಧ ಕಲಾ ತಂಡಗಳು ಪ್ರದರ್ಶಿಸಿದ ಕಲೆಗಳ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡವು. ಶ್ರೀರಾಮಚಂದ್ರ ಮತ್ತು ತಂಡ ಜನಪದ ಗಾಯನ, ನಾಡೋಜ ಎಚ್.ಎಲ್. ನಾಗೇಗೌಡ ಕಲಾ ಶಾಲೆಯ ವಿದ್ಯಾರ್ಥಿಗಳು ಕಂಸಾಳೆ, ಪಟ ಕುಣಿತ, ಬೆಂಗಳೂರಿನ ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಜಾನಪದ ನೃತ್ಯ ಸಿರಿ, ಪಾರ್ಥಸಾರಥಿ ಮತ್ತು ತಂಡದಿಂದ ಪೂಜಾ ಕುಣಿತ, ಸಂತೋಷ್ ಮತ್ತು ನಾಗರಾಜು ತಂಡದಿಂದ ವೀರಗಾಸೆ, ನಾಗರಾಜು ಮತ್ತು ತಂಡದಿಂದ ಹುಲಿವೇಶ, ಶ್ರೀನಿವಾಸ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ, ರೇಣುಕಾ ಪ್ರಸಾದ್ ಮತ್ತು ತಂಡದಿಂದ ಯಕ್ಷಗಾನ, ದೀಪು ಮತ್ತು ತಂಡದಿಂದ ಜಾನಪದ ನೃತ್ಯ, ಅನುಷ ಮತ್ತು ತಂಡದಿಂದ ಜಾನಪದ ಸಮೂಹ ನೃತ್ಯ, ಶ್ರೀನಿವಾಸ್ ಮತ್ತು ತಂಡದಿಂದ ಚರ್ಮವಾದ್ಯ, ಗಂಗಾಧರ್ ಮತ್ತು ತಂಡದಿಂದ ತಮಟೆ ವಾದನ, ಸಂಜೀವಯ್ಯ ಮತ್ತು ತಂಡದಿಂದ ಸೋಮನ ಕುಣಿತ, ಧನರಾಜ್ ಮತ್ತು ತಂಡದಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು.
ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ, ಕ್ಯೂರೇಟರ್ ಡಾ.ಯು.ಎಂ. ರವಿ, ರಂಗ ನಿರ್ದೇಶಕ ಎಸ್. ಪ್ರದೀಪ್, ಮುಖಂಡ ಹರ್ಷ ಇದ್ದರು.