ಇಂಡೋನೇಶ್ಯಾ: ಭಾರೀ ಪ್ರವಾಹ, ೪೪ ಮಂದಿ ಸಾವು

ಜಕಾರ್ತ, ಎ.೫- ಇಂಡೊನೇಶ್ಯದ ಪೂರ್ವದ ತುತ್ತತುದಿಯ ಪ್ರಾಂತದ ದ್ವೀಪವೊಂದರಲ್ಲಿ ಭಾರೀ ಮಳೆ ಸುರಿದ ಪರಿಣಾಮವಾಗಿ ದಿಢೀರ್ ಪ್ರವಾಹ ಹಾಗೂ ಭೂಕುಸಿತವಾಗಿದ್ದು, ಕನಿಷ್ಠ ೪೪ ಮಂದಿ ಮೃತಪಟ್ಟಿದ್ದಾರೆ ಹಾಗೂ ೯ ಮಂದಿ ಗಾಯಗೊಂಡಿದ್ದಾರೆಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರೈಸ್ತರು ಬಹುಸಂಖ್ಯಾತರಾಗಿರುವ ಫ್ಲೋರ್ಸ್ ದ್ವೀಪದಲ್ಲಿ ಈಸ್ಟರ್ ಸಂಡೇ ಹಬ್ಬದ ಆಚರಣೆಗಾಗಿ ಜನರು ಶನಿವಾರದಿಂದಲೇ ಸಿದ್ಧತೆ ನಡೆಸಿದ್ದರು.

ನಸುಕಿನಲ್ಲಿ ಸುರಿದ ಭಾರೀ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿ ಇಡೀ ದ್ವೀಪವೇ ಜಲಾವೃತಗೊಂಡಿತೆಂದು ರಾಷ್ಟ್ರೀಯ ವಿಪತ್ತು ಪರಿಹಾರ ಏಜೆನ್ಸಿಯ ವಕ್ತಾರ ರಾದಿತ್ಯ ಜಾತಿ ತಿಳಿಸಿದ್ದಾರೆ. ಪ್ರವಾಹದಿಂದಾಗಿ ಸಾವಿರಾರು ಮನೆಗಳು ಕೆಸರಿನ ರಾಶಿಯಲ್ಲಿ ಮುಳುಗಿದ್ದು, ದ್ವೀಪದಾದ್ಯಂತ ಹಲವಾರು ಸೇತುವೆಗಳು ಹಾಗೂ ರಸ್ತೆಗಳು ನಾಶವಾಗಿರುವುದಾಗಿ ಮೂಲಗಳು ತಿಳಿಸಿವೆ. ರವಿವಾರ ಸಂಜೆಯವರೆಗೂ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಫ್ಲೋರ್ಸ್ ದ್ವೀಪದ ಹಲವಾರು ದುರ್ಗಮ ಪ್ರದೇಶಗಳನ್ನು ತಲುಪಲು ರಕ್ಷಣಾ ಕಾರ್ಯಕರ್ತರಿಗೆ ಇನ್ನೂ ಸಾಧ್ಯವಾಗಿಲ್ಲಎನ್ನಲಾಗಿದೆ. ೯ ತಾಸುಗಳ ಕಾಲ ಸುರಿದ ಸತತ ಮಳೆಯಿಂದಾಗಿ ಫ್ಲೋರ್ಸ್ ದ್ವೀಪದ ನಾಲ್ಕು ಉಪಜಿಲ್ಲೆಗಳಲ್ಲಿ ಅಣೆಕಟ್ಟುಗಳಲ್ಲಿ ನದಿ ನೀರು ಉಕ್ಕಿ ಹರಿಯುತ್ತಿದ್ದು, ಬಿಮಾ ನಗರದಲ್ಲಿ ೧೦ ಸಾವಿರಕ್ಕೂ ನೆರೆಯಲ್ಲಿ ಮುಳುಗಿವೆ ಎಂದು ರಾದಿತ್ಯ ಜಾತಿ ತಿಳಿಸಿದ್ದಾರೆ.