ಇಂಡೋನೇಶ್ಯಾದಲ್ಲಿ ಪ್ರಬಲ ಭೂಕಂಪನ

ಜಕಾರ್ತ, ಜ.೧೦- ಇಂಡೋನೇಷ್ಯಾದ ತನಿಂಬರ್ ಪ್ರದೇಶದಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ೭.೭ರಷ್ಟಿತ್ತು ಎಂದು ಯೂರೋಪಿಯನ್ ಮೆಡಿಟರೇನಿಯನ್ ಸಿಸ್ಮೊಲಾಜಿಕಲ್ ಸೆಂಟರ್ (ಇಎಂಎಸ್‌ಸಿ) ತನ್ನ ವರದಿಯಲ್ಲಿ ಹೇಳಿದೆ. ಮುಖ್ಯವಾಗಿ ಭೂಕಂಪದ ತೀವ್ರತೆಯು ಉತ್ತರ ಆಸ್ಟ್ರೇಲಿಯಾ ಹಲವು ಭಾಗಗಳಲ್ಲಿ ಅನುಭವಕ್ಕೆ ಬಂದಿದೆ.
ಭೂಮಿಯ ಮೇಲ್ಮೈನಿಂದ ೯೭ ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಇಎಂಎಸ್‌ಸಿ ಹೇಳಿದೆ. ಪ್ರಬಲ ಭೂಕಂಪದ ಬೆನ್ನಲ್ಲೇ ಇಂಡೋನೇಷ್ಯಾ ಸರ್ಕಾರ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಿದೆ. ಆದರೆ ಸಮುದ್ರ ಮಟ್ಟದಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಕಂಡುಬರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯನ್ನು ವಾಪಸು ಪಡೆಯಲಾಗಿದೆ. ಭೂಕಂಪದ ಬಳಿಕ ಲಘು ಕಂಪನಗಳು ಉತ್ತರ ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲಿ ಅನುಭವಕ್ಕೆ ಬಂದಿವೆ. ಈ ವಿಕೋಪದಿಂದ ಕಟ್ಟಡಗಳಿಗೆ ಲಘು ಅಥವಾ ಮಧ್ಯಮ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಇಂಡೋನೇಷ್ಯಾದ ವಿಕೋಪ ನಿರ್ವಹಣೆ ಏಜೆನ್ಸಿ ಪ್ರಕಟಿಸಿದೆ. ನೈಋತ್ಯ ಮಲುಕುವಿನ ವಾಟುವೆ ಗ್ರಾಮದಲ್ಲಿ ಮನೆಗಳು ಮತ್ತು ಸಮುದಾಯ ಕಟ್ಟಡಗಳಿಗೆ ಭಾರೀ ಹಾನಿಯಾಗಿರುವ ದೃಶ್ಯ ವರದಿಗಳನ್ನು ರಾಷ್ಟ್ರೀಯ ವಿಪತ್ತು ತಗ್ಗಿಸುವ ಸಂಸ್ಥೆ ಸ್ವೀಕರಿಸಿದೆ. ಭೂಕಂಪದ ಕೇಂದ್ರಬಿಂದುವು ಆಸ್ಟ್ರೇಲಿಯಾದ ಉತ್ತರದ ತುದಿಯಿಂದ ದೂರದಲ್ಲಿ ೧೦೫ ಕಿಲೋಮೀಟರ್ (೬೫ ಮೈಲಿ) ಆಳದಲ್ಲಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಇತ್ತ ಉತ್ತರ ಆಸ್ಟ್ರೇಲಿಯಾದಲ್ಲೂ ಭೂಕಂಪನದ ಅನುಭವವಾಗಿದೆ. ಡಾರ್ವಿನ್ ನಗರ ಸೇರಿದಂತೆ ಉತ್ತರ ಆಸ್ಟ್ರೇಲಿಯಾದಲ್ಲಿ ೧,೦೦೦ ಕ್ಕೂ ಹೆಚ್ಚು ಜನರು ಭೂಕಂಪದ ಅನುಭವವನ್ನು ಜಿಯೋಸೈನ್ಸ್ ಆಸ್ಟ್ರೇಲಿಯಾ ಏಜೆನ್ಸಿಗೆ ವರದಿ ಮಾಡಿದೆ. ಭೂಕಂಪವು ಮುಖ್ಯ ಭೂಭಾಗ ಅಥವಾ ಯಾವುದೇ ದ್ವೀಪಗಳು ಅಥವಾ ಪ್ರಾಂತ್ಯಗಳಿಗೆ ಸುನಾಮಿ ಅಪಾಯವಿಲ್ಲ ಎಂದು ಜಂಟಿ ಆಸ್ಟ್ರೇಲಿಯನ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.