
ನವದೆಹಲಿ,ಸೆ.೧೭- ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಎದುರಿಸಲು “ಇಂಡಿಯಾ ಮೈತ್ರಿಕೂಟ”ದ ಜೊತೆಯಾಗಿ ಗಟ್ಟಿಯಾಗಿ ನಿಂತು ಹೋರಾಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ನಂತರ ಪುನರ್ ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮೊದಲ ಸಮಿತಿ ಸಭೆಯಲ್ಲಿ ಭಾಗಿಯಾಗಿ ಪಕ್ಷದ ನಾಯಕರು ಜೊತೆಯಾಗಿ ಇಂಡಿಯಾ ಜೊತೆ ನಿಲ್ಲಬೇಕಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.
ಈ ಮೂಲಕ ಇಂಡಿಯಾ ಮೈತ್ರಿಕೂಟಕ್ಕೆ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡ ಸಂದೇಶ ಕಳುಹಿಸಿದ್ದಾರೆ. ದೇಶದ ಏಕತೆ ಮತ್ತು ಅಖಂಡತೆ ಕಾಪಾಡಲು ವಿರೋದ ಪಕ್ಷಗಳು ಒಗ್ಗೂಡಿ ಹೋರಾಟ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.
ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದ ಸಮನ್ವಯ ಸಮಿತಿಯ ಮೊದಲ ಸಭೆಯ ಕೆಲವು ದಿನಗಳ ನಂತರ ಸೋನಿಯಾ ಗಾಂಧಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇಂಡಿಯಾ ಮೈತ್ರಿಕೂಟ ಕೆಲವು ರಾಜ್ಯಗಳಲ್ಲಿ ಸೀಟು ಹಂಚಿಕೆಯ ವ್ಯವಸ್ಥೆಗಳನ್ನು ಲೆಕ್ಕಾಚಾರ ಮಾಡುವಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದರೂ, ಇತರರಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ, ದೆಹಲಿ ಮತ್ತು ಪಂಜಾಬ್‌ನಲ್ಲಿ ಕಠಿಣ ಸಮಯವನ್ನು ನಿರೀಕ್ಷಿಸಲಾಗಿದೆ ಎನ್ನುವ ವಿಷಯವನ್ನು ಕಾರ್ಯಕಾರಿ ಸಮಿತಿಯ ಮುಂದೆ ಇಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಬಿಜೆಪಿ ಮತ್ತು ಕೇಂದ್ರದ ಮೇಲೆ ಸಂಪೂರ್ಣ ವಾಗ್ದಾಳಿ ನಡೆಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲಾ ಪ್ರಮುಖ ರಂಗಗಳಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಹಣದುಬ್ಬರ, ನಿರುದ್ಯೋಗ, ಹೆಚ್ಚುತ್ತಿರುವ ಅಸಮಾನತೆ ಅಥವಾ ರೈತರು ಮತ್ತು ಕಾರ್ಮಿಕರ ಹದಗೆಟ್ಟ ಸ್ಥಿತಿಯನ್ನು ನಿಯಂತ್ರಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಭಾರತ ಕವಲುದಾರಿಯಲ್ಲಿದೆ ಮತ್ತು ಅನೇಕ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ .ಮಣಿಪುರದಲ್ಲಿ ಇನ್ನೂ ತೆರೆದುಕೊಳ್ಳುತ್ತಿರುವ ದುರಂತ ಘಟನೆಗಳಿಗೆ ಇಡೀ ದೇಶವು ಸಾಕ್ಷಿಯಾಗಿದೆ. “ಮೋದಿ ಸರ್ಕಾರ ಮಣಿಪುರದ ಹಿಂಸಾಚಾರ ಪ್ರಕರಣ, ಹರಿಯಾಣದ ನುಹ್ ನಲ್ಲಿ ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದ್ದಾರೆ.