ಇಂಡಿಯಾ ಮೈತ್ರಿ ಒಕ್ಕೂಟದಿಂದ ಸಮಾವೇಶ; ಒಗ್ಗಟ್ಟಿನ ಮಂತ್ರಜಪ

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೨: ಕೇಂದ್ರದಲ್ಲಿ ಆಡಳಿತ ನಡೆಸುವ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸಾಮಾಜಿಕವಾಗಿ ಮತಾಧಾರಿತ ರಾಜಕಾರಣ ಮಾಡುತ್ತ ದೇಶದ ಜನರ ನಡುವೆ ದ್ವೇಷ ಬಿತ್ತಿ, ಭಯ ನಿರ್ಮಾಣ ಮಾಡುತ್ತಿದ್ದು ಎಂದು ಆರೋಪಿಸಿ ಮೋದಿ ಹಠಾವೋ, ದೇಶ್ ಬಚಾವೋ ಎನ್ನುವ ಘೋಷಣೆಯೊಂದಿಗೆ ದಾವಣಗೆರೆಯಲ್ಲಿ ಭಾರತೀಯ ಕಮ್ಯೂನಿಸ್ಟ್ ಪಕ್ಷವು ಪ್ರತಿಭಟನಾ ಮೆರವಣಿಗೆ ನಡೆಸಿತು.ಈ ವೇಳೆ ಮಾತನಾಡಿದ ಸಿಪಿಐ ಮುಖಂಡರು, ದೇಶದ ಜನರನ್ನು ಮತೀಯ ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟಿ, ಜನಾಂಗೀಯ ಶ್ರೇಷ್ಠತೆಯನ್ನು ಹುಟ್ಟುಹಾಕಿ, ಪ್ಯಾಸಿಸ್ಟ್ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರ ದೇಶದ ಬಹುತ್ವ ನಾಶ ಮಾಡಲು ಹೊರಟಿದೆ. ಮನುಸ್ಮೃತಿಯ ಆಧಾರದಂತೆ ದೇಶವನ್ನು ಆಳುವ ಅಧಿಕಾರವನ್ನು ಕ್ಷತ್ರಿಯ ವರ್ಣದಂತೆ ನಡೆಸುತ್ತದೆ. ಈ ಮನುಸ್ಮೃತಿ ಆಧಾರಿತ ಸಮಾಜದಲ್ಲಿ ಬೌದ್ಧಿಕವಾಗಿ ಆರ್‌ಎಸ್‌ಎಸ್ ಬ್ರಾಹ್ಮಣ ವರ್ಣದ ಕೆಲಸ ಮಾಡತೊಡಗಿದೆ. ಹೀಗೆ ನಮ್ಮ ಮತನಿರಪೇಕ್ಷ, ಸಮಾಜವಾದಿ ಸಂವಿಧಾನ ಅಪಾಯದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮನುಸ್ಮೃತಿಯನ್ನು ಆಧರಿಸಿ ಶ್ರೇಣೀಕೃತ ಸಮಾಜವನ್ನು ಗಟ್ಟಿಗೊಳಿಸಲು ಆರ್‌ಎಸ್ಎಸ್-ಬಿಜೆಪಿ ಪರಿವಾರ ಈಗಾಗಲೇ ಕೆಲಸ ಆರಂಭಿಸಿದೆ. ಅದಕ್ಕಾಗಿ ಬಹುಸಂಖ್ಯೆಯ ರೈತ, ಕಾರ್ಮಿಕರನ್ನು ಕಾಪೋರೇಟ್ ವ್ಯಾಪಾರಿಗಳ ಗುಲಾಮಗಿರಿಗೆ ತಳ್ಳುವ ಸಲುವಾಗಿ ರೈತ-ಕಾರ್ಮಿಕರ ಸ್ವಾವಲಂಬಿ ಬದುಕನ್ನು ನಾಶ ಮಾಡಲು ರೈತ-ಕಾರ್ಮಿಕ ವಿರೋಧಿ ಮಾರಕ ಕಾನೂನುಗಳನ್ನು ಅನುಷ್ಠಾನ ಮಾಡುತ್ತಿದೆ. ಕೇಂದ್ರದ ಮೋದಿ ಸರ್ಕಾರವು, ಒಂದು ದೇಶ, ಒಂದು ಆಡಳಿತ ಎಂಬ ನೀತಿಯನ್ನು ಜಾರಿ ಮಾಡುತ್ತ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳನ್ನು ದಮನ ಮಾಡುತ್ತ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುತ್ತಿದೆ. ಹೀಗೆ ಬಿಜೆಪಿ ಮತ್ತು ಅದರ ಪರಿವಾರ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.ಆರ್.ಎಸ್.ಎಸ್. ವಿಚಾರಧಾರೆಯನ್ನು ಅನುಸರಿಸುತ್ತಿರುವ ಬಿಜೆಪಿ ಡಾ. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚನೆಗೊಂಡ ಭಾರತ ಸಂವಿಧಾನವನ್ನು ಎಂದೂ ಒಪ್ಪಿಲ್ಲ. ಬದಲಾಗಿ ದಲಿತರ, ಹಿಂದುಳಿದ ಜಾತಿಗಳ, ಮಹಿಳೆಯರ ವಿರುದ್ಧವಾಗಿರುವ ಮನುಸ್ಮೃತಿಯನ್ನು ಭಾರತದ ಸಂವಿಧಾನವನ್ನಾಗಿಸಲು ಅದು ಸಂಚು ರೂಪಿಸುತ್ತಿದೆ. ಅಲ್ಲದೆ ಆರ್.ಎಸ್.ಎಸ್.ನ ರಾಜಕೀಯ ಮುಖವಾಗಿರುವ ಬಿಜೆಪಿ, ಮನಸ್ಮೃತಿಯ ಮೌಲ್ಯಗಳನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ದೇಶದ ಮೇಲೆ ಹೇರುವ ಪ್ರಕ್ರಿಯೆಯಲ್ಲಿ ಸದಾ ನಿರತವಾಗಿದೆ ಎಂದು ಹೇಳಿದರು.ಮೆರವಣಿಗೆಯಲ್ಲಿ ಸಿಪಿಐನ ಹೆಚ್.ಜಿ.ಉಮೇಶ್, ವಿ.ಲಕ್ಷ್ಮಣ್, ಆನಂದ ರಾಜ್, ಟಿ.ಎಸ್.ನಾಗರಾಜ್, ಯರಗುಂಟೆ ಸುರೇಶ್, ಹೆಚ್. ಕೆ.ಆರ್.ಸುರೇಶ್, ಆವರಗೆರೆ ಚಂದ್ರು, ಕಾಂಗ್ರೆಸ್ ಪಕ್ಷದ ಕೆ.ಜಿ.ಶಿವಕುಮಾರ್, ಎಸ್. ಮಲ್ಲಿಕಾರ್ಜುನ, ಶುಭಮಂಗಳ, ಎಎಪಿಯ ಶಿವಕುಮಾರಪ್ಪ, ರವೀಂದ್ರ, ಅರುಣ್ ಕುಮಾರ್, ಆದಿಲ್ ಖಾನ್ ಇತರರು ಇದ್ದರು.