ಕಲಬುರಗಿ:ಸೆ.28: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಹಾಗೂ ತಮಿಳ್ನಾಡಿನಲ್ಲಿ ಸುಮಾರು 40 ಸೀಟುಗಳನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ದುರುದ್ದೇಶದಿಂದ ರಾಜ್ಯ ಸರ್ಕಾರ ತಮಿಳ್ನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಅವರು ಗಂಭೀರ ಆರೋಪ ಮಾಡಿದರು.
ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಡಿಯಾ ಒಕ್ಕೂಟ ಉಳಿಸಿಕೊಳ್ಳಲು ಹಾಗೂ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಹಾಗೂ ತಮಿಳ್ನಾಡಿನಲ್ಲಿ 40 ಸೀಟು ಗೆಲ್ಲುವುದೇ ಕಾಂಗ್ರೆಸ್ ಗುರಿಯಾಗಿದೆ. ಹೀಗಾಗಿ ರಾಜ್ಯದ ಹಿತವನ್ನು ಅಡವಿಡುತ್ತಿದ್ದಾರೆ ಎಂದು ದೂರಿದರು.
ತಮಿಳ್ನಾಡಿಗೆ ಕಾವೇರಿ ನೀರು ಬಿಡುವ ಮೂಲಕ ರಾಜ್ಯದ ರೈತರನ್ನು ವಂಚಿಸಿದ್ದಾರೆ. ಹೀಗಾಗಿ ರಾಜ್ಯದ ರೈತರ ಹಿತದೃಷ್ಟಿಯಿಂದ ಶುಕ್ರವಾರ ಕರೆ ನೀಡಲಾದ ಕರ್ನಾಟಕ ಬಂದ್‍ವನ್ನು ಜೆಡಿಎಸ್ ಬೆಂಬಲಿಸುವುದು ಎಂದು ಅವರು ಘೋಷಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‍ದಿಂದ ಮತ್ತೆ ಆಪರೇಷನ್ ಹಸ್ತ ವಿಚಾರವನ್ನು ಪ್ರಸ್ತಾಪಿಸಿದ ಅವರು, ಆಪರೇಷನ್ ಕುರಿತು ತಲೆ ಕೆಡಿಸಿಕೊಳ್ಳುವ ಅಗತ್ಯವೇನಲ್ಲ. 1991ರಿಂದ ನಾನು ರಾಜಕೀಯ ನೋಡಿಕೊಂಡು ಬಂದಿದ್ದೇನೆ. ಆರು ಬಾರಿ ಶಾಸಕನಾಗಿದ್ದೇನೆ. ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂತು, ಯಾವಾಗ ಅಧಿಕಾರ ಕಳೆದುಕೊಂಡಿರುವುದು ರಾಜ್ಯದ ಜನರಿಗೆ ಗೊತ್ತು. ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ ಎಂದು ಅವರು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದರೂ ಸಹ ಇನ್ನೂ ಆಪರೇಷನ್ ಕಾರ್ಯಾಚರಣೆ ಮಾಡುತ್ತಿದೆ. ಇದು ಆ ಪಕ್ಷಕ್ಕೆ ಇರುವ ಅಭದ್ರತೆಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಈ ಹಿಂದೆ ಇದೇ ಕಾಂಗ್ರೆಸ್ಸಿನವರು ಜೆಡಿಎಸ್‍ನ್ನು ಬಿಜೆಪಿಯ ಬಿ ಟೀಂ ಎಂದು ಟೀಕಿಸುತ್ತಿದ್ದರು ಎಂದು ಹೇಳಿದ ಅವರು, ಈಗ ಕರ್ನಾಟಕ ಎ ಟೀಮ್, ತಮಿಳ್ನಾಡಿ ಬಿ. ಟೀಮ್ ಎಂದು ಪ್ರತಿ ಟೀಕೆ ಮಾಡಿದರು.
ಕಾಂಗ್ರೆಸ್ ಈಗ ಕೋಮುವಾದಿಗಳನ್ನು ದೂರ ಇಡಬೇಕು ಎಂದು ಹೇಳುತ್ತಿದೆ. ಈ ಹಿಂದೆ ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡರು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಅಸಮಾಧಾನ ಇಲ್ಲ. ಪಕ್ಷದಲ್ಲಿನ ಮುಸ್ಲಿಂರ ಹಿತಕ್ಕೆ ಧಕ್ಕೆ ಆಗದಂತೆ ಪಕ್ಷದ ತತ್ವ ಸಿದ್ದಾಂತಗಳಲ್ಲಿ ಕಾರ್ಯನಿರ್ವಹಿಸುವ ಕುರಿತು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ಹೇಳಿದ್ದಾರೆ. ದೇವೆಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಏನು ಹೇಳುತ್ತಾರೋ ಅದೇ ಅಂತಿಮ ಎಂದು ಅವರು ಮೈತ್ರಿಯನ್ನು ಸಮರ್ಥಿಸಿಕೊಂಡರು.
ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಮೈತ್ರಿಯನ್ನು ಎಲ್ಲರೂ ಕೂಡಿಕೊಂಡೇ ಮಾಡಿಕೊಂಡಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರೂ ಸಹ ಪಕ್ಷದಲ್ಲಿಯೇ ಇರುತ್ತಾರೆ. ಅವರು ಕೂಡ ಎಲ್ಲಿಯೂ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.