
ನವದೆಹಲಿ, ಸೆ. ೭- ಇಂಡಿಯಾ -ಭಾರತ ಎಂದು ಬದಲಾಗಲಿದೆ ಎಂಬ ವಿಚಾರ ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಯಾವುದೇ ರೀತಿಯ ಹೇಳಿಕೆಗೆಗಳನ್ನು ನೀಡಬಾರದು ಎಂದು ಸಚಿವರಿಗೆ ಮತ್ತು ಪಕ್ಷದ ನಾಯಕರಿಗೆ ತಾಕೀತು ಮಾಡಿದ್ದಾರೆ.
ಸೆ. ೧೮ ರಿಂದ ೫ ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಮಸೂದೆ ಮಂಡಿಸಲು ಕೇಂದ್ರಸರ್ಕಾರ ಸಜ್ಜಾಗಿದೆ ಎಂಬ ವದಂತಿಗಳು ಹಬ್ಬಿದ್ದವು.
ಅಲ್ಲದೆ, ಇಂಡಿಯಾ ಮೈತ್ರಿಕೂಟ ಹೆಸರಿನಲ್ಲಿ ಪ್ರತಿಪಕ್ಷಗಳು ಒಂದಾಗಿದ್ದು, ಇದಕ್ಕೆ ತಿರುಗೇಟು ನೀಡಲು ಭಾರತ ಹೆಸರನ್ನು ಬದಲಿಸಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದ್ದವು.
ರಾಷ್ಟ್ರಪತಿ ಕಚೇರಿಯಿಂದ ಜಿ ೨೦ ಶೃಂಗಸಭೆಯ ಪ್ರತಿನಿಧಿಗಳಿಗೆ ಕಳುಹಿಸಲಾದ ಆಮಂತ್ರಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಮಂತ್ರಣ ನೀಡಿತ್ತು. ಈ ಪ್ರಸ್ತಾಪಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಡಿಯಾ ಭಾರತ ಕುರಿತಂತೆ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಮೋದಿ ಸೂಚಿಸುವ ಮೂಲಕ ಈ ವಿವಾದಗಳಿಗೆ ಇತಿಶ್ರೀ ಹಾಡಿದ್ದಾರೆ.