ಇಂಡಿಯಾ ಕೂಟಕ್ಕೆ ನಾಯಕನೇ ಇಲ್ಲ:ಮೋದಿ ವ್ಯಂಗ್ಯ

ಭೋಪಾಲ್, ಸೆ.೧೪- ವಿರೋಧ ಪಕ್ಷಗಳ ಮೈತ್ರಿಕೂಟ “ಇಂಡಿಯಾ”ಕ್ಕೆ ನಾಯಕರೇ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸನಾತನ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಗುಪ್ತ ಕಾರ್ಯಸೂಚಿ ಅಳವಡಿಸಿಕೊಂಡಿದ್ದು ಇದರ ವಿರುದ್ದ ಹೋರಾಟ ಅನಿವಾರ್ಯ ಎಂದಿದ್ದಾರೆ.

ಇಂಡಿಯಾ ಒಕ್ಕೂಟದ ಸದಸ್ಯರು ಮುಂದಿನ ದಿನಗಳಲ್ಲಿ ನಮ್ಮ ಮೇಲೆ ದಾಳಿ ಹೆಚ್ಚಿಸುತ್ತಾರೆ. ಹೀಗಾಗಿ ದೇಶಾದ್ಯಂತ ಎಲ್ಲಾ ’ಸನಾತನಿಗಳು’ ಮತ್ತು ದೇಶವನ್ನು ಪ್ರೀತಿಸುವ ಜನರು ಎಚ್ಚರವಾಗಿರಬೇಕು. ಅಂತಹವರನ್ನು ತಡೆಯಬೇಕಾಗಿದೆ ಎಂದು ಕರೆ ನೀಡಿದ್ದಾರೆ

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಬಿನಾದಲ್ಲಿ ೫೦,೭೦೦ ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಇಂಡಿಯಾ ಒಕ್ಕೂಟ ’ಸನಾತನ’ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಬಂದಿದೆ. ಇದು ಅವರಿಂದ ಸಾಧ್ಯವಿಲ್ಲ ಎನ್ನುವ ಮೂಲಕ ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಸನಾತನ ಧರ್ಮದ ವಿರುದ್ದ ವಿವಾದಕ್ಕೆ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.

ಸ್ವಾಮಿ ವಿವೇಕಾನಂದ ಮತ್ತು ಲೋಕಮಾನ್ಯ ತಿಲಕರಿಗೆ ಸ್ಫೂರ್ತಿ ನೀಡಿದ ‘ಸನಾತನ ಧರ್ಮ’ವನ್ನು ಇಂಡಿಯಾ ಮೈತ್ರಿಕೂಟದ ಜನರು ಅಳಿಸಿ ಹಾಕಲು ಬಯಸುತ್ತಿದ್ದಾರೆ. ಇಂಡಿಯಾ ಒಕ್ಕೂಟ ಸನಾತನ ಧರ್ಮವನ್ನು ನಾಶಮಾಡಲು ಬಯಸಿದೆ. ಬಹಿರಂಗವಾಗಿ ಸನಾತನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ವಿರುದ್ದ ವಾಗ್ದಾಳಿ:

ಒಂದು ದೇಶ ಅಥವಾ ರಾಜ್ಯದ ಬೆಳವಣಿಗೆಗೆ ಸರ್ಕಾರ ಸಂಪೂರ್ಣ ಪಾರದರ್ಶಕತೆಯೊಂದಿಗೆ ನಡೆಯುವುದು ಮುಖ್ಯವಾಗಿದೆ ಮತ್ತು ಭ್ರಷ್ಟಾಚಾರಕ್ಕೆ ಮದ್ಯಪ್ರದೇಶದಲ್ಲಿ ಕಡಿವಾಣ ಹಾಕಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಒಂದು ಕಾಲದಲ್ಲಿ ಮದ್ಯ ಪ್ರದೇಶದಲ್ಲಿ ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟ ಸಮಯವಿತ್ತು. ಸ್ವಾತಂತ್ರ್ಯಾ ನಂತರ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಮಂದಿ ಭ್ರಷ್ಟಾಚಾರ ಮತ್ತು ಅಪರಾಧದ ಹೊರತಾಗಿ ಏನನ್ನೂ ನೀಡಿಲ್ಲ ಎಂದು ಕಾಂಗ್ರೆಸ್ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಆತ್ಮನಿರ್ಭರತೆಗೆ ಆದ್ಯತೆ:

ಬಿನಾ ರಿಫೈನರಿಯಲ್ಲಿ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ನ ಉದ್ಘಾಟನೆಯಿಂದ ಭಾರತವನ್ನು ಆತ್ಮನಿರ್ಭರ್ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಆಧುನಿಕ ಪೆಟ್ರೋಕೆಮಿಕಲ್ ಸಂಕೀರ್ಣ, ಬಿನಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇದರೊಂದಿಗೆ ಹೊಸ ಕೈಗಾರಿಕೆಗಳು ಇಲ್ಲಿಗೆ ಬರುತ್ತವೆ ಮತ್ತು ಎಂಎಸ್‌ಎಂಇಗಳು ಪಡೆಯುತ್ತವೆ. ಅವಕಾಶಗಳು ಮತ್ತು ಯುವಕರಿಗೆ ಉದ್ಯೋಗಾವಕಾಶಗಳು ಸಿಗಲಿವೆ ಎಂದು ತಿಳಿಸಿದ್ದಾರೆ

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ ಮಧ್ಯಪ್ರದೇಶದದಲ್ಲಿ ೨೦೧೪ ರಲ್ಲಿ ೨೮೫೪ ಪೆಟ್ರೋಲ್ ಪಂಪ್‌ಗಳಿದ್ದವು, ಇಂದು ೨೦೨೩ ರಲ್ಲಿ ೫೯೮ಕ್ಕೆ ಏರಿಕೆಯಾಗಿವೆ. ೨೦೧೪ ರಲ್ಲಿ ೮೬೫ ಮಂದಿ ವಿತರಕರಿದ್ದರು ಇಂದು ೧೫೫೨ಕ್ಕೆ ಏರಿಕೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಮಧ್ಯ ಪ್ರದೇಶದಲ್ಲಿ ೨೦೧೪ ರಲ್ಲಿ ೭೦ ಲಕ್ಷ ಎಲ್ ಪಿಜಿ ಸಂಪರ್ಕಗಳು, ಇಂದು ೧೮೫ ಲಕ್ಷ ಸಂಪರ್ಕಕ್ಕೆ ಏರಿಕೆಯಾಗಿದೆ ೨೭೦೦ ಪೈಪ್ಡ್ ನೈಸರ್ಗಿಕ ಅನಿಲ ಸಂಪರ್ಕ ಸಂಖ್ಯೆ ದ್ವಿಗುಣವಾಗಿದೆ ಎಂದು ತಿಳಿಸಿದ್ದಾರೆ.