ಇಂಡಿಯಾ ಒಕ್ಕೂಟದ ಅಧ್ಯಕ್ಷ ಖರ್ಗೆ ಆಯ್ಕೆಗೆ ಕೇಂದ್ರ ಸಚಿವ ಜೋಶಿ ಹತಾಶೆ: ಶರಣಪ್ರಕಾಶ್ ಪಾಟೀಲ್

ಕಲಬುರಗಿ:ಜ.16: ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಒಬ್ಬ ಕನ್ನಡಿಗರಾಗಿ ಸ್ವಾಗತಿಸಬೇಕಾಗಿತ್ತು. ಆದಾಗ್ಯೂ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಿರುಗಾಳಿ ಎದ್ದಿರುವುದರಿಂದ ಹತಾಶರಾಗಿ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಟೀಕಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟವು ಸಾಮಾನ್ಯ ಸಂಘಟನೆಯಲ್ಲ. ಪ್ರಾದೇಶಿಕ ಪಕ್ಷಗಳವರು ಸೇರಿ ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ದುರಾಡಳಿತ, ಜನವಿರೋಧಿ ನೀತಿಯನ್ನು ವಿರೋಧಿಸಿ ಒಕ್ಕೂಟ ಮಾಡಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಗಳಾಗಿರುವ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡಿಎಂಕೆ ಸೇರಿದಂತೆ ಇತರೆ ಪಕ್ಷಗಳು ಇವೆ. ಅನೇಕ ವರ್ಷಗಳಿಂದಲೂ ರಾಜ್ಯಗಳಲ್ಲಿ ಅಡಳಿತ ನಡೆಸಿರುವ ಪಕ್ಷಗಳು. ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದು ಕನ್ನಡಿಗರಿಗೆ ಹೆಮ್ಮೆ. ಅಂತಹ ಹೆಮ್ಮೆಯನ್ನು ಓರ್ವ ಕನ್ನಡಿಗರಾಗಿ ಕೇಂದ್ರ ಜೋಶಿ ಅವರು ವ್ಯಕ್ತಪಡಿಸಬೇಕಿತ್ತು ಎಂದರು.
ಖರ್ಗೆಯವರಲ್ಲಿನ ನಾಯಕತ್ವದ ಗುಣವು ಪ್ರತಿಯೊಬ್ಬರಿಗೂ ಗೊತ್ತಿದೆ. ಅಂತಹ ನಾಯಕತ್ವ ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ್ದನ್ನು ಸ್ವಾಗತಿಸಬೇಕಿತ್ತು. ಆದಾಗ್ಯೂ, ಅವರಿಗೆ ಹೆದರಿಕೆ ಆಗಿದೆ. ಖರ್ಗೆಯವರಿಂದ ಬಿರುಗಾಳಿ ಎದ್ದಿದೆ. ಕಾಂಗ್ರೆಸ್ ಪರ ಅಲೆ ಎದ್ದಿದೆ. ಹೀಗಾಗಿ ಅವರಲ್ಲಿ ಸೋಲಿನ ಭೀತಿ ಆವರಿಸಿದೆ ಎಂದು ಅವರು ಹೇಳಿದರು.
ಖರ್ಗೆಯವರಿಗೆ ಇಂಡಿಯಾ ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಬಲಿಪಶು ಮಾಡಲಾಗುತ್ತಿದೆ ಎಂಬುದು ಅನುಕಂಪ ಹೇಳಿಕೆಯಲ್ಲ ಎಂದ ಅವರು, ಜೋಶಿ ಅವರು ಆ ಕುರಿತು ತೀರ್ಮಾನ ಮಾಡುವುದಲ್ಲ. ಅದನ್ನು ಜನರು ತೀರ್ಮಾನಿಸುತ್ತಾರೆ ಎಂದರು.
ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಸ್ಪರ್ಧಿಸದೇ ಇರುವ ಕುರಿತು ಗೊಂದಲವಾಗಿದೆ ಎಂಬುದರ ಕುರಿತು ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆಗೆ ನಿಯಮಗಳು ಇವೆ. ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿಯ ಆಯ್ಕೆಗಾಗಿ ವೀಕ್ಷಕರನ್ನು ಆಯ್ಕೆ ಮಾಡಲಾಗಿದೆ. ನಾನೂ ಸಹ ಒಂದು ಕ್ಷೇತ್ರಕ್ಕೆ ವೀಕ್ಷಕನಾಗಿರುವೆ. ಆ ವೀಕ್ಷಕರು ಕೊಟ್ಟ ವರದಿಯನ್ವಯ ಪಕ್ಷದ ವರಿಷ್ಠರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು ಲೋಕಸಭಾ ಚುನಾವಣೆಗೆ ಸಚಿವರಿಗೆ ಗುರಿ ಕೊಡಲಾಗಿದೆ ಎಂಬ ಸಂಗತಿಯ ಕುರಿತು ಪ್ರಸ್ತಾಪಿಸಿದ ಅವರು, ಅಂತಹ ಗುರಿ ಕೊಟ್ಟಿಲ್ಲ. ಎಲ್ಲರೂ ಒಟ್ಟಾಗಿ, ಒಂದಾಗಿ ಪಕ್ಷವನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಲಾಗಿದೆ ಎಂzದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕುರಿತು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಏಕವಚನದಲ್ಲಿ ನಿಂದಿಸಿದ್ದಕ್ಕೆ ಆಕ್ಷೇಪಿಸಿದ ಸಚಿವರು, ಅನಂತಕುಮಾರ್ ಹೆಗಡೆ ಅವರ ಕೊಡುಗೆ ಏನು? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಚುನಾವಣೆಯ ಸಂದರ್ಭದಲ್ಲಿ ಇಂತಹ ಭಾವನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳ ಕಾಲ ಏನು ಮಾಡುತ್ತಿದ್ದರು ಎಂದು ಕಿಡಿಕಾರಿದರು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೂರು ತಿಂಗಳಿಗೊಮ್ಮೆ ಪ್ರತಿ ತಾಲ್ಲೂಕಿನಲ್ಲಿ ಜನತಾದರ್ಶನ ಮಾಡಬೇಕಿತ್ತು. ಅದು ಆಗಿಲ್ಲ ಎಂಬ ದೂರುಗಳು ಬಂದಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ. ಶರಣಪ್ರಕಾಶ್ ಪಾಟೀಲ್ ಅವರು, ಒಮ್ಮೆ ಜನತಾದರ್ಶನ ಕಾರ್ಯಕ್ರಮ ಮಾಡಿರುವೆ. ನಂತರ ಬೆಳಗಾವಿ ಅಧಿವೇಶನ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಾಡಲು ಆಗಿಲ್ಲ. ಇನ್ನು ಮುಂದೆ ಜನತಾದರ್ಶನ ಕಾರ್ಯಕ್ರಮಗಳನ್ನು ಮಾಡುವೆ ಎಂದು ತಿಳಿಸಿದರು.