ಇಂಡಿಯಾ ಒಕ್ಕೂಟಕ್ಕೆ ಹೆಚ್ಚಿನ ಬಹುಮತ: ಸಿದ್ದರಾಮಯ್ಯ

ಸಂಜೆವಾಣಿ ನ್ಯೂಸ್
ಮೈಸೂರು:ಏ.14:- ದೇಶದಲ್ಲಿ ಐಎನ್‍ಡಿಐಎ ಒಕ್ಕೂಟಕ್ಕೆ ಬಹುಮತ ಸಿಗುವ ನಿರೀಕ್ಷೆ ಇದ್ದು, ರಾಜ್ಯದಲ್ಲೂ ಕಾಂಗ್ರೆಸ್‍ಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಕಾರಣಕ್ಕೂ ಎನ್‍ಡಿಎ ಅಧಿಕಾರಕ್ಕೆ ಬರಲು ಹಾಗೂ ಬಹುಮತ ಪಡೆಯಲು ಸಾಧ್ಯವಿಲ್ಲ. ಐಎನ್‍ಡಿಐಎ ಒಕ್ಕೂಟಕ್ಕೆ ಬಹುಮತ ಸಿಗುವ ನಿರೀಕ್ಷೆ ಇದೆ. ಜತೆಗೆ ರಾಜ್ಯದಲ್ಲೂ ಕಾಂಗ್ರೆಸ್‍ಗೆ ಹೆಚ್ಚು ಸ್ಥಾನ ಸಿಗಲಿದೆ. 400ಕ್ಕೂ ಹೆಚ್ಚು ಸ್ಥಾನಪಡೆಯುವುದಾಗಿ ಹೇಳಿಕೊಳ್ಳುತ್ತಿರುವ ಬಿಜೆಪಿಯದ್ದು ಜನರ ದಾರಿತಪ್ಪಿಸುವ ಕಾರ್ಯತಂತ್ರ. ಚುನಾವಣಾ ಪ್ರಚಾರದ ಸಲುವಾಗಿ ಪ್ರಧಾನಿ ಮೋದಿ ಅವರು ಮೈಸೂರಿಗೆ ಬರುತ್ತಿರುವುದಕ್ಕೆ ನನ್ನದೇನು ಅಭ್ಯಂತರವಿಲ್ಲ. ಆದರೆ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಲಿ. ನಿರುದ್ಯೋಗ, ತೆರಿಗೆ ಹಂಚಿಕೆ, ಬರಗಾಲಕ್ಕೆ ಇಂದಿನವರೆಗೂ ಯಾಕೆ ಪರಿಹಾರ ನೀಡಿಲ್ಲ ಎಂಬುದಕ್ಕೆಲ್ಲಾ ಉತ್ತರ ನೀಡಲಿ ಎಂದರು.
ಇದೇ ವೇಳೆ ಅಂಬೇಡ್ಕರ್ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ ಎಂಬ ನರೇಂದ್ರ ಮೋದಿ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಸಂವಿಧಾನ ಬದಲಾಯಿಸುತ್ತೇನೆ ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದರು. ಆಗ ಅವರ ಮೇಲೆ ಯಾವ ಕ್ರಮಕೈಗೊಳ್ಳಲಿಲ್ಲ. ಕೇಂದ್ರ ಸಚಿವರಾಗಿದ್ದ ಅವರ ವಿರುದ್ಧ ಅಂದೇ ಏಕೆ ಕ್ರಮಕೈಗೊಳ್ಳಲಿಲ್ಲ. ಅನಂತ್ ಕುಮಾರ್ ಹೆಗ್ಡೆ ಉತ್ತರ ಕನ್ನಡದಲ್ಲಿ ಏನು ಕೆಲಸ ಮಾಡಿರಲಿಲ್ಲ. ಐದು ವರ್ಷಗಳ ಕಾಲ ಮನೆಯಲ್ಲೇ ಕುಳಿತಿದ್ದ. ಚುನಾವಣೆ ಸಮಯದಲ್ಲಿ ಹೊರಗೆ ಬಂದಿದ್ದ. ಹೀಗಾಗಿ ಅವನು ಸೋಲುವುದು ಗೊತ್ತಿದ್ದು, ಅವನಿಗೆ ಟಿಕೆಟ್ ಕೊಟ್ಟಿಲ್ಲ ಅಷ್ಟೇ ಎಂದ ಅವರು, ಬಿಜೆಪಿ ಅವರು ಎಂದೂ ಸಂವಿಧಾನದ ಪರ ಇಲ್ಲ ಎಂದು ಟೀಕಿಸಿದರು.