ಇಂಡಿಯಾ ಅಧಿಕಾರಕ್ಕೆ ಬಂದರೆ ೨ ದಿನ ಪಿಎಂ ಆಯ್ಕೆ

ನವದೆಹಲಿ,ಮೇ.೩೦- ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ೪೮ ಗಂಟೆಗಳಲ್ಲಿ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಇಂದಿಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ತೆಗೆದಿರುವಾಗಲೇ ಈ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮೈತ್ರಿಕೂಟದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಪಕ್ಷ ಸ್ವಾಭಾವಿಕವಾಗಿ ನಾಯಕತ್ವ ವಹಿಸಿಕೊಳ್ಳುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ನಿರ್ಣಾಯಕ ಜನಾಭಿಪ್ರಾಯ ಪಡೆಯಲಿದ್ದು, ೪೮ ಗಂಟೆಯಲ್ಲಿ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.
‘ಇಂಡಿಯಾ ಮೈತ್ರಿಕೂಟ’ ಸರಳ ಬಹುಮತಕ್ಕೆ ಅಗತ್ಯ ಇರುವ ೨೭೨ಕ್ಕಿಂತ ಅಧಿಕ ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಇಂಡಿಯಾ ಒಕ್ಕೂಟದ ಪಕ್ಷದ ಪರವಾಗಿ ಜನಾಭಿಪ್ರಾಯ ಇರಲಿದೆ. ಎನ್‌ಡಿಎ ಮೈತ್ರಿಕೂಟದ ಕೆಲವೊಂದು ಪಕ್ಷಗಳು ನಮ್ಮ ಮೈತ್ರಿಗೆ ಸೇರಲಿವೆ. ಅವರನ್ನು ಸೇರಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ದೊಡ್ಡ ವಿಜಯ ಗಳಿಸಲಿದೆ. ನಮ್ಮಲ್ಲಿ ಸೇಡಿನ ರಾಜಕಾರಣವಿಲ್ಲ. ಭಾರತ ಪ್ರಕಾಶಿಸುತ್ತಿದೆ ಎಂದು ೨೦೦೪ರಲ್ಲಿ ಬಿಜೆಪಿ ಪ್ರಚಾರ ಮಾಡಿದರೂ, ಕಾಂಗ್ರೆಸ್ ಗೆಲುವು ಸಾಧಿಸಿ ಮೈತ್ರಿ ಸರ್ಕಾರ ರಚಿಸಿತ್ತು ಎಂದಿದ್ದಾರೆ.
೨೦೨೪ರಲ್ಲಿ ಅದೇ ಪುನರಾವರ್ತನೆಯಾಗಲಿದೆ. ರಾಜಸ್ಥಾನ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಸೀಟುಗಳಿಕೆ ಹೆಚ್ಚಳವಾಗಲಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಹಾಗೂ ಅಸ್ಸಾಂನಲ್ಲಿ ನಮ್ಮ ಪ್ರದರ್ಶನ ಉತ್ತಮವಾಗಿರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಸೀಟುಗಳಿಗೆ ಹೆಚ್ಚಳವಾಗಲಿದೆ ಎಂದ ಅವರು, ಬಿಜೆಪಿ ೨೦೧೯ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ. ಪಶ್ಚಿಮ ಬಂಗಾಳದಲ್ಲೂ ಅವರ ಗಳಿಕೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ.