ಇಂಡಿಯಾ ಅಧಿಕಾರಕ್ಕೆ ಬಂದರೆ ಸಿಎಎ ರದ್ದು;ಚಿದು ಭರವಸೆ

ತಿರುವನಂತಪುರ,ಏ.೨೧:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ರದ್ದು ಮಾಡಲಾಗುವುದು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಭರವಸೆ ನೀಡಿದ್ದಾರೆ.
ತಿರುವನಂತಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಸಿಎಎ ಬಗ್ಗೆ ಕಾಂಗ್ರೆಸ್ ಉಲ್ಲೇಖ ಮಾಡಿಲ್ಲ. ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಎಎ ರದ್ದು ಮಾಡುವುದಾಗಿ ಹೇಳಿದರು.
ಮೋದಿ ಗ್ಯಾರಂಟಿಯ ಬಿಜೆಪಿ ಪ್ರಣಾಳಿಕೆ ಕುರಿತು ಕಿಡಿಕಾರಿರುವ ಚಿದಂಬರಂ, ಬಿಜೆಪಿ ರಾಜಕೀಯ ಪಕ್ಷವಾಗಿ ಈಗ ಉಳಿದಿಲ್ಲ. ನರೇಂದ್ರ ಮೋದಿ ಅವರನ್ನು ಆರಾಧಿಸುವ ಪಂಗಡವಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.
ಕಳೆದ ೧೦ ವರ್ಷಗಳ ಮೋದಿ ಆಡಳಿತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ. ಪ್ರಹಾಪ್ರಭುತ್ವದ ರಕ್ಷಣೆಗಾಗಿ ಜನರು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿದ ಎಲ್ಲ ೩೯ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ೧ ಲೋಕಸಭಾ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಅವರು ಭವಿಷ್ಯ ನುಡಿದರು.