ಇಂಡಿಯಾಗೆ ಗೆಲುವು ಬಿಜೆಪಿ ಮನೆಗೆ:ಮಮತಾ ಭವಿಷ್ಯ

ಕೋಲ್ಕತ್ತಾ,ಆ.೪- ಪ್ರತಿಪಕ್ಷಗಳ ಮೈತ್ರಿಕೂಟ “ಇಂಡಿಯಾ” ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವ್ಯಂಗ್ಯಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು “ಇಂಡಿಯಾ” ಮೈತ್ರಿ ದೇಶದ ಪರವಾಗಿದೆ ಎಂದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಗೆಲುವು ನಿಶ್ಚಿತ. ಬಿಜೆಪಿಗೆ ಮನೆ ಹಾದಿ ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿ ಸರ್ಕಾರದ ಅಧಿಕಾರಿಗಳ ಮೇಲಿನ ನಿಯಂತ್ರಣ ಕಸಿದುಕೊಳ್ಳುವ ಉದ್ದೇಶಿತ ಕಾನೂನಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಬೆಂಬಲಿಸದಂತೆ ವಿರೋಧ ಪಕ್ಷಗಳ ಮೈತ್ರಿಕೂಟದ ಪಕ್ಷಗಳಿಗೆ ಅಮಿತ್ ಶಾ ಮನವಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು ಬಿಜೆಪಿ ಹಿಂಸಾಚಾರ ಬೆಂಬಲಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ನಮ್ಮ ಮೈತ್ರಿ ಹೊಸದು. ದೇಶಾದ್ಯಂತ ಅಸ್ತಿತ್ವವನ್ನು ಹೊಂದಿದ್ದೇವೆ. ಖಂಡಿತವಾಗಿ, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಇಂಡಿಯಾ ಒಕ್ಕೂಟ ದೇಶದಾದ್ಯಂತ ಅಸ್ತಿತ್ವವನ್ನು ಹೊಂದಿದೆ ಮತ್ತು “ವಿಪತ್ತು, ಕೋಮು ಉದ್ವಿಗ್ನತೆ ಮತ್ತು ನಿರುದ್ಯೋಗದಿಂದ” ದೇಶವನ್ನು ಉಳಿಸಲು ಅದು ಗೆಲ್ಲಬೇಕು ಎಂದು ಹೇಳಿದ್ದಾರೆ
“ಭಾರತ ನಮ್ಮ ಮಾತೃಭೂಮಿ ಮತ್ತು ಈ ಇಂಡಿಯಾ ಮೈತ್ರಿ ನಮ್ಮ ತಾಯಿ ನಾಡಿಗಾಗಿ. ಆದ್ದರಿಂದ ಎನ್‌ಡಿಎಗೆ ಬೆಲೆ ಇಲ್ಲ. ಅವರು ಇಷ್ಟು ವರ್ಷಗಳಿಂದ ಸಭೆ ನಡೆಸಲಿಲ್ಲ. ಮೊದಲು ಅವರೊಂದಿಗೆ ಇದ್ದವರು ಬಿಟ್ಟು ಹೋಗಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
“ಭಯೋತ್ಪಾದನೆ ಸೃಷ್ಟಿಸುವುದು ಬಿಜೆಪಿ ಸಂಪ್ರದಾಯವೇ ಹೊರತು ಸಂವಿಧಾನವಲ್ಲ. ಕೆಲವೊಮ್ಮೆ ನನಗೆ ನಾಚಿಕೆಯಾಗುತ್ತದೆ. ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಹಿಂಸಿಸಲಾಗುತ್ತಿದೆ. ವರದಿಗಾರರನ್ನು ಸಹ ಅವರು ಹಿಂದೂ ಅಥವಾ ಮುಸ್ಲಿಂ ಎಂದು ಕೇಳುತ್ತಾರೆ. ಅವರು ಹಿಂಸೆಯ ಹೊರತಾಗಿ ಬೇರೆ ಮಾರ್ಗವಿಲ್ಲ ಎಂದು ಭಾವಿಸುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ.

ನಾವೇ ಗೆಲ್ಲುತ್ತೇವೆ: ಶಾ
ದೆಹಲಿ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಆದೇಶ ಅತಿಕ್ರಮಿಸುವ ಸರ್ಕಾರದ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ,ವಿರೋಧ ಪಕ್ಷಗಳು ದೆಹಲಿಯ ಬಗ್ಗೆ ಕಾಳಜಿ ವಹಿಸಬೇಕು ಎಂದಿದ್ದಾರೆ.
“ನೀವು ಮೈತ್ರಿ ಮಾಡಿಕೊಂಡಿದ್ದೀರಿ ಎಂಬ ಕಾರಣಕ್ಕೆ ದೆಹಲಿಯಲ್ಲಿ ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರವನ್ನು ಬೆಂಬಲಿಸಬೇಡಿ ಎಂದು ವಿರೋಧ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಏಕೆಂದರೆ ಮೈತ್ರಿ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಪೂರ್ಣ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲ್ಲುತ್ತಾರೆ” ಹೇಳಿದ್ದಾರೆ.