ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ; ತಪ್ಪಿದ ದುರಂತ

ಮಂಗಳೂರು, ಮೇ.೨೫-ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಹೊರಡಲು (ಟೇಕಾಫ್‌ಗೆ) ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಭಾರೀ ದುರಂತವೊಂದು ತಪ್ಪಿಹೋಗಿದೆ.
ನಗರದಿಂದ ದುಬೈಗೆ ಬೆಳಗ್ಗೆ ೮.೩೦ಕ್ಕೆ ಪ್ರಯಾಣಿಕರ ಸಹಿತ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ.
ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಇಂಡಿಗೋ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ. ತಕ್ಷಣವೇ ಇದನ್ನರಿತ ಪೈಲಟ್ ಭಾರೀ ದುರಂತವನ್ನು ತಪ್ಪಿಸುವ ಮೂಲಕ ಪ್ರಯಾಣಿಕರ ಜೀವ ಉಳಿಸಿದ್ದಾರೆ. ಹಕ್ಕಿ ಡಿಕ್ಕಿ ಹೊಡೆದೊಡನೆ ಪೈಲಟ್ ಅಪಾಯದ ಸೂಚನೆ ಅರಿತು ಎಟಿಸಿಗೆ ಮಾಹಿತಿ ನೀಡಿದ್ದಾರೆ.
ನಂತರ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಾಪಾಸ್ ಬಂದಿಳಿದಿದೆ. ಸದ್ಯ ಅಧಿಕಾರಿಗಳು ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ಮಾಡುತ್ತಿದ್ದಾರೆ.
ಇನ್ನು ಪ್ರಯಾಣಿಕರಿಗಾಗಿ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ.