ಇಂಟರ್ನೆಟ್ ಮಾಧ್ಯಮ : ಉದ್ಯೋಗ ಕ್ಷೇತ್ರ – ಹೊಸ ಅವಕಾಶ ಸೃಷ್ಟಿ

ರಾಯಚೂರು,ಡಿ.೦೨-ಇಂಟರ್ನೆಟ್ ಹಾಗೂ ಸ್ಮಾರ್ಟ್ಫೋನ್ ತಂತ್ರಜ್ಞಾನದ ಅಭಿವೃದ್ಧಿಯ ಕಾರಣದಿಂದಾಗಿ ನಾವಿಂದು ಬಹುಮಾಧ್ಯಮಗಳನ್ನು ಅಂಗೈಯಲ್ಲೇ ಬಳಸಲು ಸಾಧ್ಯವಾಗಿದ್ದು, ಇದು ಅನೇಕ ರೀತಿಯ ಉದ್ಯೋಗ ಮತ್ತು ಸ್ವಯಂ ಉದ್ಯೋಗಗಳನ್ನು ಕೂಡ ಹುಟ್ಟುಹಾಕಿದೆ. ಯೂಟ್ಯೂಬ್ ವಿಡಿಯೋ ಹಾಗೂ ಬ್ಲಾಗ್‌ಗಳಂತಹ ಇಂಟರ್ನೆಟ್ ಕಂಟೆಂಟ್ಗಳನ್ನು ತಯಾರಿಸಿ, ಅನೇಕರು ಲಕ್ಷಾಂತರ ರೂ. ಸಂಪಾದಿಸುವ ಮಾರ್ಗ ಕಂಡುಕೊಂಡಿದ್ದಾರೆ ಎಂದು ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ವಿಜಯ್ ಜಾಗಟಗಲ್ ಹೇಳಿದರು.
ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಗಣಕ ವಿಜ್ಞಾನ ವಿಭಾಗ, ಅರ್ಥಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆಯ ಕೋಶದ(Iಕಿಂಅ) ಸಹಯೋಗದಲ್ಲಿ ನಡೆದ ’ಉನ್ನತಿ’ ಹೆಸರಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪತ್ರಿಕೆ-ರೇಡಿಯೋ-ಟೆಲಿವಿಷನ್-ಇಂಟರ್ನೆಟ್ ಜನರ ಬಹುಆಯ್ಕೆಯ ಮಾಧ್ಯಮಗಳಾಗಿದ್ದು, ಅವುಗಳೆಲ್ಲವನ್ನೂ ನಾವಿಂದು ಸ್ಮಾರ್ಟ್ಫೋನ್ ಎಂಬ ಒಂದೇ ಮಾಯಾ ಸಾಧನದ ಮೂಲಕ ಬಳಸಲು ಸಾಧ್ಯವಾಗಿದೆ.
ನುರಿತರು ಮತ್ತು ಪರಿಣಿತರು ಮಾತ್ರ ಈ ಹಿಂದೆ ಮಾಧ್ಯಮಗಳಿಗೆ ಬರೆಯುತ್ತಿದ್ದರು ಅಥವಾ ಧ್ವನಿ-ದೃಶ್ಯ ಕಾರ್ಯಕ್ರಮಗಳನ್ನು ತಯಾರಿಸುತ್ತಿದ್ದರು. ಆದರೆ ಸಾಮಾಜಿಕ ಜಾಲತಾಣವೆಂಬ ಮುಕ್ತ ಸಂವಹನ ವ್ಯವಸ್ಥೆಯು ಎಲ್ಲರಿಗೂ ಈ ಅವಕಾಶ ನೀಡಿದೆ. ಯಾರು ಬೇಕಾದರೂ ಇಂಟರ್ನೆಟ್ ಕಂಟೆಂಟ್ ತಯಾರಿಸಬಹುದು ಮತ್ತು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ಸಂಪಾದನೆಗೆ ದಾರಿ ಮಾಡಿಕೊಳ್ಳಬಹುದು ಎಂದು ನವ ಉದ್ಯೋಗಾವಕಾಶಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಕ್ಯಾಂಪಸ್ ರೆಡ್ಕ್ರಾಸ್ ಸಂಚಾಲಕ ಡಾ.ರವಿ.ಎಂ ಮಾತನಾಡಿ, ಸಂವಿಧಾನ ಮತ್ತು ಕಾನೂನುಗಳ ಅರಿವಿಲ್ಲದ ಅನೇಕರು ಆಕ್ಷೇಪಾರ್ಹ ಸಂಗತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುತ್ತಾರೆ. ಆದರೆ ಪತ್ರಿಕೋದ್ಯಮದಂತಹ ಕೋರ್ಸ್‌ಗಳನ್ನು ಮಾಡಿ ತರಬೇತಿ ಹೊಂದಿದವರು ಗುಣಮಟ್ಟದ ಕಂಟೆಂಟ್ಗಳನ್ನು ತಯಾರಿಸಲು ಸಾಧ್ಯವಾಗುತ್ತದೆ.
ಇದು ಒಂದು ರೀತಿಯಲ್ಲಿ ಆರೋಗ್ಯಯುತವಾದ ಮಾಹಿತಿ-ಸಂದೇಶಗಳನ್ನು ಪಸರಿಸಲು ಸಹಾಯ ಮಾಡುತ್ತೆ. ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಲು ಗಣಕಯಂತ್ರ ಬಳಕೆಯ ಜ್ಞಾನ ಹೊಂದಿರಬೇಕಾದುದು ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗೃತಿ ಬೆಳೆಸಿಕೊಂಡು ಅಗತ್ಯ ಜ್ಞಾನ ಮತ್ತು ಕೌಶಲ್ಯಗಳನ್ನು ಸಂಪಾದಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಯಂಕಣ್ಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಐಕ್ಯುಎಸಿ ಸಂಚಾಲಕ ಡಾ. ಮಹಂತೇಶ್ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ವಿಜಯ್ ಸರೋದೆ ವಂದಿಸಿದರು, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸ ರಾಮಚಂದ್ರ ಗಬ್ಬೂರು, ಗಣಕವಿಜ್ಞಾನ ವಿಭಾಗದ ಉಪನ್ಯಾಸಕಿ ಶಿಲ್ಪಾ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.