ಇಂಜಿನಿಯರ್ ಆಕಾಶ್ ಪ್ರಭುರವರಿಗೆ ಸನ್ಮಾನ

ಕೋಲಾರ ಮಾ.೨೭: ನಿಸ್ವಾರ್ಥ ಮನಸ್ಸಿನಿಂದ ಕೆಲಸ ಮಾಡುವವರು ಇದ್ದಾಗ ಮಾತ್ರ ಉತ್ತಮ ಸೇವೆ ಮಾಡಲು ಸಾಧ್ಯ ಎಂದು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮುರುಳಿಮೋಹನ್ ಅಭಿಪ್ರಾಯಪಟ್ಟರು. ಮಾನವ ಅಭಿವೃದ್ಧಿ ಯೋಗ ಟ್ರಸ್ಟ್ ವತಿಯಿಂದ ಕೋಲಾರ ನಗರದ ಕಾರಂಜಿಕಟ್ಟೆಯಲ್ಲಿ ಹಮ್ಮಿಕೊಂಡಿದ್ದ, ಇಂಜಿನಿಯರ್ ಬಿಲ್ಡಿಂಗ್ ಕಾಂಟ್ರ್ಯಾಕ್ಟ್ ಆಕಾಶ್ ಪ್ರಭು ಅವರ ಸಾಮಾಜ ಸೇವೆಯನ್ನು ಗೌರವಿಸಿ ಸನ್ಮಾನಿಸಿ ಮಾತನಾಡಿದರು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳನ್ನು ಗುರುತಿಸುವ ಜವಾಬ್ದಾರಿ ಹೆಚ್ಚಾಗಬೇಕು, ಆ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದರು. ಪ್ರತಿಯೊಬ್ಬ ಮನುಷ್ಯ ತನ್ನನ್ನು ತಾನು ಒಂದೊಳ್ಳೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ದನಾಗುತ್ತಾನೆ, ಹಾಗಾಗಿ ಇಂತಹ ಪ್ರಮಾಣಿಕ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದರಿಂದ ಇನ್ನೂ ಸಮಾಜಸೇವೆಯನ್ನು ಹೆಚ್ಚಾಗಿ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಮಾನವ ಅಭಿವೃದ್ಧಿ ಯೋಗ ಟ್ರಸ್ಟ್ ಅಧ್ಯಕ್ಷ ಡಾ. ಪೋಸ್ಟ್ ನಾರಾಯಣಸ್ವಾಮಿ ಮಾತಾನಾಡಿ, ಪುರಾತನ ಕಾಲದಿಂದಲೂ ಇಂತಹ ಪುಣ್ಯದಂತ ಉತ್ತಮವಾದ ಶ್ಲಾಘನೀಯ ಸೇವೆಗಳು ನಡೆದುಕೊಂಡು ಬರುತ್ತಿದ್ದು ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಪರಸ್ಪರ ಸಹಕಾರ ಮನೋಭಾವನೆ ಇದ್ದಾಗ ಮಾತ್ರ ಇಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಉಳಿದುಕೊಳ್ಳುತ್ತವೆ ಎಂದು ಹೇಳಿದರು.
ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ ಸೇವಾ ಹೀ ಪರಮೋ ಧರ್ಮ ಎಂಬ ಉಕ್ತಿಯಂತೆ ನಾವೆಲ್ಲರೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ಸ್ವಲ್ಪ ಕಾಲವನ್ನಾದರೂ ಸಮಾಜಸೇವೆಗೆ ಮುಡಿಪಾಗಿಡಬೇಕು. ಸಮಾಜದ ನಾಗರಿಕರಾಗಿ ನಮಗೆ ಸೇವೆ ನಮ್ಮ ಕರ್ತವ್ಯವಾಗಬೇಕು. ನಮ್ಮ ಸುತ್ತಮುತ್ತಲಿನ ಮಕ್ಕಳಲ್ಲಿ ಇಂತಹ ಸಾಮಜ ಸೇವೆಯಂತಹ ಪ್ರವೃತ್ತಿಗಳನ್ನು ಬೆಳೆಸಬೇಕೆಂದರು.
ಕಾರ್ಯಕ್ರಮದಲ್ಲಿ ಹರಿಕೃಷ್ಣ ಜಾನಪದ ಸಾಂಸ್ಕೃತಿಕ ಸೇವಾ ಟ್ರಸ್ಟ್ ಅದ್ಯಕ್ಷ ಬಳೇ ಸೀತರಾಮಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಖಜಾಂಚಿ ಶರಣಪ್ಪ ಜಮದಾರ, ನಿವೃತ್ತ ರಾಜ್ಯ ಪ್ರಶಸ್ತಿ ಶಿಕ್ಷಕ ಸುಲೇಮಾನಖಾನ್, ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ವೆಂಕಟಕೃಷ್ಣಪ್ಪ, ರಾಮಚಂದ್ರರೆಡ್ಡಿ, ನಾಗರತ್ನಮ್ಮ, ಕೃಷ್ಣಾರೆಡ್ಡಿ, ನಿವೃತ್ತ ಅಂಚೆ ಅಧೀಕ್ಷಕರಾದ ರಾಮಚಂದ್ರಾರೆಡ್ಡಿ, ನಾಗವೇಣಿ ಮುಂತಾದವರು ಉಪಸ್ಥಿತರಿದ್ದರು.