ಇಂಜಿನಿಯರಿಂಗ ಪ್ರವೇಶದ ಶುಲ್ಕ ಹೆಚ್ಚಳಕ್ಕೆ ಎಬಿವಿಪಿ ಖಂಡನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.17: ಸರ್ಕಾರಿ ಕೋಟಾದಡಿಯಲ್ಲಿ ಇಂಜಿನೀಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳವನ್ನು ಎಬಿವಿಪಿ ಖಂಡಿಸಿದ್ದು ಹೆಚ್ಚಳದ ಶುಲ್ಕವನ್ನು ಹಿಂಪಡೆಯುವಂತೆ ಆಗ್ರಹಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸ್’ನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೆ ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಅವರು ಇತ್ತೀಚಿಗೆ ಹೇಳಿಕೆ ಕೊಟ್ಟಿದ್ದರು.ಆದರೆ ಈಗ ಸರಕಾರ ಕೆಲವು ಪರೋಕ್ಷ ಕ್ರಮಗಳ ಮೂಲಕ ಶುಲ್ಕ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಆದೇಶವನ್ನು ಹೊರಡಿಸಿದೆ.ಇದರಿಂದಾಗಿ ಇಂಜಿನಿಯರಿಂಗ ಓದುವ ಕನಸು ಕಂಡಿರುವ ರಾಜ್ಯದ ಬಡ ಮತ್ತು ಪ್ರತಿಭಾವಂತ  ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿಯುವಂತಾಗಿದೆ.
ರಾಜ್ಯದ  ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರಕಾರಿ ಕೋಟಾದ ಎಂಜಿನಿಯರಿಂಗ್  ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಸ್ತಕ ಸಾಲಿನಿಂದ  83,526  ರೂ ಹಾಗೂ 90,060 ರೂ  ಗಳಿಗೆ ನಿಗದಿಪಡಿಸಲಾಗಿದೆ.  ಹಿಂದಿನ ವರ್ಷ ಈ  ಶುಲ್ಕವು 58,806 ರೂ  ಹಾಗೂ 65,340 ರೂ (  ವಿಶ್ವವಿದ್ಯಾಲಯ ಶುಲ್ಕವನ್ನು ಒಳಗೊಂಡಂತೆ)  ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರವು 2021 – 2022  ನೇ  ಸಾಲಿನಿಂದ  20,000 ರೂ  ಕಾಲೇಜುಗಳ ಇತರ ಶುಲ್ಕ ಹಾಗೂ ಸ್ಕಿಲ್ ಲ್ಯಾಬ್  ಸೌಲಭ್ಯಕ್ಕಾಗಿ 10,000 ರೂ  ರಿಂದ   20,000   ರೂಪಾಯಿವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ  ಸರ್ಕಾರ ಕಾಲೇಜುಗಳಿಗೆ ಅವಕಾಶ ನೀಡಿದೆ.  ಇದರಿಂದಾಗಿ 40 ಸಾವಿರ ರೂಪಾಯಿವರೆಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಯು ನೀಡಬೇಕಾಗಿರುತ್ತದೆ. 
ಸರ್ಕಾರ ಈ ಹಿಂದಿನ ವರ್ಷಗಳಲ್ಲಿ ಕಾಲೇಜುಗಳಲ್ಲಿ ಈ ರೀತಿ ಹೆಚ್ಚಿನ ಶುಲ್ಕಗಳನ್ನು ಪಡೆಯದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿ ಯ ಮೂಲಕ ಕಡಿವಾಣ ಹಾಕಲಾಗಿತ್ತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಹಾಗೆ ಸರ್ಕಾರವೇ ಈ ಎಲ್ಲ  ಹೆಚ್ಚುವರಿ ಶುಲ್ಕಗಳನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿ ಕಾಲೇಜುಗಳಿಗೆ ನೀಡುತ್ತಿದೆ. ಅದೇ ರೀತಿ ಸರ್ಕಾರಿ ಇಂಜಿನಿಯರಿಂಗ್  ಕಾಲೇಜುಗಳಲ್ಲಿನ ಶುಲ್ಕಗಳಿಗೂ  ಹಾಗೂ ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜಿನ ಶುಲ್ಕಗಳಿಗೂ  40 ಸಾವಿರ ರೂಪಾಯಿಗಳವರೆಗೆ ಹೆಚ್ಚಳ ಮಾಡಲಾಗಿದೆ. ಕೋವಿಡನಿಂದಾಗಿ  ಆರ್ಥಿಕ ಸಂಕಷ್ಟಕ್ಕೆ ಒಳಗಾದ ಪೋಷಕರಿಗೆ ಸರ್ಕಾರ ಪರೋಕ್ಷವಾಗಿ  ಹೆಚ್ಚಳ ಮಾಡಿರುವ ಶುಲ್ಕ ಹೊರೆಯಾಗಲಿದೆ.
ಬಡ – ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತು ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಲಕರ / ಪೋಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿಸಿರುವ ಆದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸರಕಾರಕ್ಕೆ ಆಗ್ರಹಿಸಿದೆ. ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ ಈರಣ್ಣ, ಹುಲೇಶ, ಅಶೋಕ್ ಸ್ವಾಮಿ, ಶ್ರೀನಿವಾಸ್, ಭೀಮ, ಆದೇಶ, ಗೋವಿಂದರಾಜು ಉಪಸ್ಥಿತರಿದ್ದರು.