ಇಂಜಿನಿಯರಿಂಗ್ ಸರ್ಕಾರಿ ಸೀಟುಗಳ ಮೇಲೆ 10 ಸಾವಿರ ರೂ ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.04: ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಸರ್ಕಾರಿ ಸೀಟುಗಳ ಮೇಲೆ ಏಕಾಏಕಿ 10,000/- ರೂ ಏರಿಕೆ ವಿರೋಧಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಿ ಉನ್ನತ ಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ AIDSO ಜಿಲ್ಲಾ ಅಧ್ಯಕ್ಷರಾದ ಗುರಳ್ಳಿ ರಾಜ ಮಾತನಾಡುತ್ತಾ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಲ್ಕ ರಚನೆ  21-22 (ದಿನಾಂಕ : 14-11-2021)  ರ ಸುತ್ತೋಲೆ ಪ್ರಕಾರ, ಈ ವರ್ಷದ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ 10 ಸಾವಿರದವರೆಗೂ ಶುಲ್ಕ ಏರಿಕೆ  ಮಾಡಿರುವುದು ರಾಜ್ಯದ ವಿದ್ಯಾರ್ಥಿಗಳನ್ನು ಅತ್ಯಂತ ಆತಂಕಕ್ಕೆ ತಳ್ಳಿದೆ.  ಈಗಾಗಲೇ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದು, ಮೊದಲ ಸುತ್ತಿನ ಸೀಟು ಹಂಚಿಕೆ ಆಗಿದೆ. ಈಗ ಧಿಡೀರನೆ ಶುಲ್ಕ ಏರಿಕೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮಾತ್ರವಲ್ಲ ಕಾನೂನು ಬಾಹಿರ ನಡೆಯಾಗುತ್ತದೆ.
ಆದ್ದರಿಂದ ಈ ಕೂಡಲೇ ಶುಲ್ಕ ಹೆಚ್ಚಳದ ಆದೇಶವನ್ನು ಹಿಂಪಡೆಯಬೇಕು, ಪ್ರಥಮ ವರ್ಷದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಿನಕ್ಕೆ 10 ಗಂಟೆ ಪಾಠ ಮಾಡುತ್ತೇವೆ ಎಂಬ ವಿದ್ಯಾರ್ಥಿಗಳ, ಶಿಕ್ಷಕರ ವಿರೋಧಿ‌ ನಿರ್ಧಾರವನ್ನು ಹಿಂಪಡೆಯಬೇಕು.! ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು SSP ಮೂಲಕ ವಿದ್ಯಾರ್ಥಿ ವೇತನ ಪಡೆದುಕೊಳ್ಳುವಲ್ಲಿ   ಆಗುತ್ತಿರುವ ತೊಂದರೆಗಳನ್ನು ಪರಿಹರಿಸಿ ಮತ್ತು ತ್ವರಿತವಾಗಿ ವಿದ್ಯಾರ್ಥಿವೇತನ  ವಿದ್ಯಾರ್ಥಿಗಳ ಕೈ ಸೇರುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ..
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು  AIDSO ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಕೆ. ಈರಣ್ಣ ವಹಿಸಿದ್ದರು. ಈ ಸಂದರ್ಭದಲ್ಲಿ AIDSO ಜಿಲ್ಲಾ ಉಪಾಧ್ಯಕ್ಷೆ ಜೆ.ಸೌಮ್ಯ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್.ಜೆ.ಪಿ, ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಎಮ್. ಶಾಂತಿ, ನಿಂಗರಾಜ್, ಅನುಪಮಾ ಮತ್ತು ವಿದ್ಯಾರ್ಥಿಗಳಾದ ಸ್ನೇಹ, ಸ್ಪೂರ್ತಿ, ಕಾರ್ತಿಕ್, ಮೊಷನ್, ಸಂಜನ ಮತ್ತಿತರರು ಇದ್ದರು.