ಇಂಜಿನಿಯರಿಂಗ್ ಪ್ರವೇಶಾತಿ ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನೆ

ಮೈಸೂರು,ಡಿ.4:- ಇಂಜಿನಿಯರಿಂಗ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟುಗಳ ಮೇಲೆ ಏಕಾಏಕಿ 10ಸಾವಿರದವರೆಗೂ ಶುಲ್ಕ ಏರಿಸಿರುವುದನ್ನು ಖಂಡಿಸಿ, ತಕ್ಷಣವೇ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಲ್ಕ ರಚನೆ 21-22ರ ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ ಈ ವರ್ಷದ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ 10ಸಾವಿರದವರೆಗೂ ಶುಲ್ಕ ಏರಿಕೆ ಮಾಡಿರುವ ನಿರ್ಧಾರ ರಾಜ್ಯದ ವಿದ್ಯಾರ್ಥಿಗಳನ್ನು ಅತ್ಯಂತ ಆತಂಕಕ್ಕೆ ತಳ್ಳಿದೆ. ಈಗಾಗಲೇ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದು ಮೊದಲ ಸುತ್ತಿನ ಸೀಟೂ ಹಂಚಿಕೆ ಆಗಿದೆ. ಈಗ ದಿಢೀರನೆ ಶುಲ್ಕ ಏರಿಕೆ ಮಾಡಿರುವುದು ವಿದ್ಯಾರ್ಥಿ ವಿರೋಧಿ ಮಾತ್ರವಲ್ಲ, ಕಾನೂನು ಬಾಹಿರ ನಡೆಯಾಗುತ್ತದೆ ಎಂದರು.
ಸರ್ಕಾರ ಶುಲ್ಕ ಏರಿಕೆಯ ನಿರ್ಧಾರವನ್ನು ವಾಪಸ್ ಪಡೆದು ಮೊದಲಿದ್ದ ಶುಲ್ಕವನ್ನು ಮಾತ್ರ ಪಡೆಯಬೇಕು. ಇತರೇ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿರುವುದುದನ್ನು ಈ ಕೂಡಲೇ ನಿಲ್ಲಿಸಲು ಆದೇಶ ನೀಡಬೇಕು. ಇದರೊಂದಿಗೆ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹತ್ತು ಗಂಟೆ ಅವಧಿಯಷ್ಟು ಪಾಠ ಮಾಡಬೇಕು ಎಂಬ ನಿರ್ಧಾರ ಈಗಾಗಲೇ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಮತಷ್ಟು ಒತ್ತಡಕ್ಕೆ ತಳ್ಳುತ್ತದೆ. ಹಾಗಾಗಿ ಈ ಮನವಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದರು.
ಈ ಕೂಡಲೇ ಶುಲ್ಕ ಹೆಚ್ಚಳ ಆದೇಶವನ್ನು ಹಿಂಪಡೆಯಬೇಕು. ಪ್ರಥಮ ವರ್ಷದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ದಿನಕ್ಕೆ 10ಗಂಟೆ ಪಾಠ ಮಾಡುತ್ತೇವೆ ಎಂಬ ನಿರ್ಧಾರವನ್ನು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಹಿತದೃಷ್ಟಿಯಿಂದ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್, ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.