ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಚಾಲನೆ

??????

ಅರಸೀಕೆರೆ, ನ. ೧೫- ತಾಲ್ಲೂಕಿನ ಜನತೆಯ ಬಹು ಅಪೇಕ್ಷಿತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿರುವ ಇಂಜಿನಿಯರಿಂಗ್ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವುದರೊಂದಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಣ ಕೈಗಾರಿಕಾ ಕ್ಷೇತ್ರ ಬಲವರ್ಧನೆಯಿಂದ ಕ್ಷೇತ್ರದ ಚಿತ್ರಣವೇ ಬದಲಾಗುತ್ತದೆ ಎಂಬ ನಂಬಿಕೆ ನನ್ನದು. ಹಾಗಾಗಿಯೇ ಜನತೆಯ ಬೇಕು ಬೇಡಗಳನ್ನು ಅರಿತು ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಜತೆ ಜತೆಗೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರೊಂದಿಗೆ ಹೋಬಳಿವಾರು ವಸತಿ ಶಾಲೆಗಳನ್ನು ನಿರ್ಮಿಸಿಕೊಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಕೊಟ್ಟಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಂತಸ ಹಂಚಿಕೊಂಡರು.
ಅದೇ ರೀತಿ ಕ್ಷೇತ್ರದ ಜನತೆಯ ಬಹು ದಶಕಗಳ ಬೇಡಿಕೆಯಾಗಿದ್ದ ಇಂಜಿನಿಯರಿಂಗ್ ಕಾಲೇಜನ್ನು ಕಳೆದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಮಂಜೂರು ಮಾಡಿಸಿದ್ದು, ಇದರ ಶಂಕುಸ್ಥಾಪನೆಯನ್ನು ಸಹ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ನೆರವೇರಿಸಿದ್ದರು. ಈಗ ೫೮ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ. ಇದರಿಂದ ಅರಸೀಕೆರೆ ಸೇರಿದಂತೆ ನೆರೆ ಹೊರೆಯ ತಾಲ್ಲೂಕಿನ ವಿದ್ಯಾರ್ಥಿಗಳಿಗೂ ಈ ಇಂಜಿನಿಯರಿಂಗ್ ಕಾಲೇಜು ವರದಾನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಗೊಲ್ಲರಹಳ್ಳಿ ಪಟೇಲ್ ಶಿವಣ್ಣ ಮಾತನಾಡಿ, ಸರ್ಕಾರದ ಬೃಹತ್ ಪ್ರಮಾಣದ ಯೋಜನೆ ಹಾಗೂ ಕಾಮಗಾರಿಯನ್ನು ಒಂದು ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಂಡು ತರುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಈ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಶಾಸಕರು ಅರಸೀಕೆರೆಗೆ ಇಂಜಿನಿಯರಿಂಗ್ ಕಾಲೇಜು ತಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ ವಿದ್ಯಾಭ್ಯಾಸಕ್ಕೆ ನೀಡುವ ಆದ್ಯತೆಯಂತೆ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಒತ್ತು ನೀಡುವುದರಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಶಾಸಕರು ಗಮನ ಹರಿಸುವಂತೆ ಮನವಿ ಮಾಡಿದರು.
ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ. ಪ್ರಸಾದ್ ಮಾತನಾಡಿ ಸುಂದರ ಪರಿಸರದ ಅಂಗಳದಲ್ಲಿ ನಿರ್ಮಾಣವಾಗುತ್ತಿರುವ ನೂತನ ಇಂಜಿನಿಯರಿಂಗ್ ಕಾಲೇಜು ತಾಲ್ಲೂಕಿನ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ಅಡಿಪಾಯವಾಗಲಿ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಮೂಲಭೂತ ಸೌಕರ್ಯಗಳು ಕಾಡದಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆಯ ಎಇಇ ನಟೇಶ್ ಮಾತನಾಡಿ, ಹದಿನೈದು ಎಕರೆ ವಿಶಾಲ ಪ್ರದೇಶದಲ್ಲಿ ೫೮ ಕೋಟಿ ವೆಚ್ಚದಲ್ಲಿ ನೂತನ ಎಂಜಿನಿಯರಿಂಗ್ ಕಟ್ಟಡ ನಿರ್ಮಾಣವಾಗಲಿದ್ದು, ಗುತ್ತಿಗೆಯನ್ನು ಶ್ರೀ ಶ್ರೀನಿವಾಸ ನಿರ್ಮಾಣ ಸಂಸ್ಥೆ ಪಡೆದುಕೊಂಡಿದೆ. ಅಲ್ಲದೆ ಹದಿನೆಂಟು ತಿಂಗಳಲ್ಲಿ ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷ ಎಂ. ಸಮೀವುಲ್ಲಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ವತ್ಸಲಾ ಶೇಖರಪ್ಪ, ನಗರಸಭೆ ಸದಸ್ಯರಾದ ಗಿರೀಶ್‌ಕಾಂತೇಶ್‌ದರ್ಶನ್, ಪುಟ್ಟಸ್ವಾಮಿ, ರಾಜಶೇಖರ್, ಜೆಡಿಎಸ್ ಮುಖಂಡರಾದ ಗಂಗಾಧರ್, ಗಿರೀಶ್, ಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಯ್ಯ, ಹಾಲಿ ಉಪಾಧ್ಯಕ್ಷ ಕುಮಾರ್, ತಾಲ್ಲೂಕು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.