ಇಂಗ್ಲೆಂಡ್ ವಿರುದ್ಧ ಜೈಸ್ವಾಲ್ ಭರ್ಜರಿ ದ್ವಿಶತಕ

ವಿಶಾಖಪಟ್ಟಣ,ಫೆ.೩:ಇಲ್ಲಿನ ಡಾ. ವೈ.ಎಸ್ ರಾಜಶೇಖರರೆಡ್ಡಿ ಕ್ರೀಡಾಂಗಣದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ೨ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಯುವ ಆಟಗಾರ ಯಶಸ್ವಿಜೈಸ್ವಾಲ್ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಇದರಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಗಳಿಸಲು ನೆರವಾಗಿದೆ. ಮೊದಲ ದಿನದ ಆಟದಲ್ಲಿ ಜೈಸ್ವಾಲ್ ಅವರು ೧೫೧ ಎಸೆತಗಳಲ್ಲಿ ಶತಕ ಬಾರಿಸಿದ್ದರು. ಮೊದಲ ದಿನದ ಆಟ ಅಂತ್ಯಗೊಂಡಾಗ ೧೭೯ ರನ್ ಬಾರಿಸಿ ಅಜೇಯರಾಗುಳಿದರು.
೨ನೇ ದಿನದ ಆಟದಲ್ಲಿ ಅದ್ಭುತ ಬ್ಯಾಂಟಿಂಗ್‌ನೊಂದಿಗೆ ಜೈಸ್ವಾಲ್ ೨೯೦ ಎಸೆತಗಳಲ್ಲಿ ೭ ಸಿಕ್ಸರ್ ಹಾಗೂ ೧೮ ಬೌಂಡರಿಗಳ ನೆರವಿನಿಂದ ೨೦೯ ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತದ ಕಿರಿಯ ಆಟಗಾರ ಎಂಬ ಕೀರ್ತಿಗೆ ಜೈಸ್ವಾಲ್ ಪಾತ್ರರಾಗಿದ್ದಾರೆ. ೨ನೇ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅವರನ್ನೊರತುಪಡಿಸಿ ಭಾರತ ಕ್ರಿಕೆಟ್ ತಂಡದ ಅಗ್ರಕ್ರಮಾಂಕದ ಬ್ಯಾಟರ್ ೩೫ ರನ್‌ಗಿಂತ ಹೆಚ್ಚು ಕಲೆ ಹಾಕಿಲ್ಲ. ಈಗ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕಲೆ ಹಾಕಿರುವ ಒಟ್ಟು ರನ್‌ಗಳ ಪೈಕಿ ಜೈಸ್ವಾಲ್ ಅವರ ಬ್ಯಾಟ್‌ನಿಂದಲೇ ಅರ್ಧದಷ್ಟು ರನ್‌ಗಳು ಬಂದಿರುವುದು ವಿಶೇಷ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ೩೯೬ ರನ್‌ಗಳಿಗೆ ಸರ್ವಪತನ ಕಂಡಿದೆ. ಇಂಗ್ಲೆಂಡ್ ಪರ ಆಂಡರ್ ಸನ್, ಶೊಯೆಬ್ ಬಹೀರ್, ಸೋಹಾನ್ ಅಹ್ಮದ್ ತಲಾ ೩ ವಿಕೆಟ್ ಪಡೆದರು.