ಇಂಗ್ಲೆಂಡ್ ನಿಂದ ಬೆಂಗಳೂರಿಗೆ 240 ಮಂದಿ ಆಗಮನ

ಬೆಂಗಳೂರು,ಜ.೧೦- ಇಂಗ್ಲೆಂಡ್ ನಲ್ಲಿ ಕೊರೊನಾ ರೂಪಾಂತರ ಸೋಂಕು ಕಾಣಿಸಿಕೊಂಡ ಬಳಿಕ ರದ್ದುಮಾಡಲಾಗಿದ್ದ ವಿಮಾನಯಾನ ಸಂಚಾರ ಬೆಂಗಳೂರು ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಆರಂಭವಾಗಿದೆ.

ಭಾರತ – ಇಂಗ್ಲೆಂಡ್ ವಿಮಾನಯಾನ ಪುನರಾರಂಭಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಜಾನೆ ೪-೩೦ಕ್ಕೆ ಮೊದಲ ವಿಮಾನದಲ್ಲಿ ೨೪೦ ಪ್ರಯಾಣಿಕರು ಆಗಮಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆರ್?ಟಿ- ಪಿಸಿಆರ್ ಪರೀಕ್ಷೆಗೆ ರಾಜ್ಯ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ. ಪರೀಕ್ಷಾ ವರದಿ ಕೈ ಸೇರಲು ಸುಮಾರು ೫ ಗಂಟೆ ತೆಗೆದುಕೊಳ್ಳಲಿದೆ ಪರೀಕ್ಷೆಗಾಗಿ ಪ್ರಯಾಣಿಕರು ತಮ್ಮ ಸರದಿಯಲ್ಲಿ ಕಾಯುತ್ತಿದ್ದಾರೆ.

ಸುಮಾರು ೩೦ ಕ್ಕೂ ಅಧಿಕ ಸಿಬ್ಬಂದಿ ಟರ್ಮಿನಲ್ ಒಳಭಾಗದಲ್ಲಿ ನಿಯೋಜನೆಗೊಂಡಿದ್ದು, ಪ್ರಯಾಣಿಕರ ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದಾರೆ .

ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದವರನ್ನು ನೇರವಾಗಿ ಆಸ್ಪತ್ರೆಗೆ ದಾಖಲು ಮಾಡಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದವರನ್ನು ಒಂದಷ್ಟು ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್ ನಲ್ಲಿಡಲು ಸರ್ಕಾರ ಮುಂದಾಗಿದೆ.

ರೂಪಾಂತರ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತ-ಇಂಗ್ಲೆಂಡ್ ನಡುವೆ ವಿಮಾನಯಾನ ಸಂಚಾರ ರದ್ದು ಪಡಿಸಲಾಗಿತ್ತು. ತದನಂತರ ಕೇಂದ್ರ ಸರ್ಕಾರ ಜನವರಿ ೮ರಿಂದ ಜನವರಿ ೨೩ರ ತನಕ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ