ಇಂಗ್ಲೀಷ್ ವ್ಯಾಮೋಹ ಗ್ರಾಮ ಸಂಸ್ಕ್ರತಿಗೆ ಮಾರಕ

*

ದಾವಣಗೆರೆ.ನ.೨೨; ಇಂಗ್ಲೀಷ್ ಭಾಷಾ ವ್ಯಾಮೋಹವು ಕನ್ನಡದ ಮೂಲ ಬೇರುಗಳನ್ನು ಸಡಿಲಿಸುವ ಕೆಲಸವನ್ನು ಮಾಡಿ,ಗ್ರಾಮೀಣ ಸಂಸ್ಕೃತಿಗೆ ಮಾರಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್, ಯುವಕರು ಕನ್ನಡದ ಕಾವಲುಗಾರರಾಗಿ ನೆಲ ಜಲ ಭಾಷೆಯ ಸಂರಕ್ಷಣೆಗಾಗಿ ಪಣತೊಡಬೇಕಾಗಿದೆ ಎಂದರು.ಅವರು ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದಲ್ಲಿ ಕನ್ನಡ ಜನಜಾಗೃತಿ ವೇದಿಕೆ ಸಂಘದವರು ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಕನ್ನಡ ಭಾಷೆಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ನಮ್ಮ ಪ್ರಯತ್ನಗಳು ರಾಜ್ಯೋತ್ಸವದ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕನ್ನಡ ಪುಸ್ತಕಗಳ ಓದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ನಾಡು ನುಡಿಗೆ ಪೂರಕವಾದ ಸಿನಿಮಾಗಳ ನಿರ್ಮಾಣ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿ ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ಭಾಷೆಯ ಆತಂಕವನ್ನು ದೂರಮಾಡಬೇಕಾಗಿದೆ. ನೆಲದ ಭಾಷೆಯ ಆತಂಕ ಮತ್ತು ಅದರ ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕು. ಜೊತೆಗೆ ಕನ್ನಡವನ್ನು ಹೃದಯದ ಭಾಷೆಯಾಗಿಸಿಕೊಳ್ಳುವತ್ತ ನಮ್ಮ ಹೆಜ್ಜೆಯನ್ನು ಪ್ರಜ್ಞಾಪೂರ್ವಕವಾಗಿ ಇಡಬೇಕಾಗಿದೆ ಎಂದರು.