ಇಂಗ್ಲೀಷ್ ಭಾಷೆ ಕಲಿಕೆಯಿಂದ ಅವಕಾಶಗಳು ಹೆಚ್ಚಳ

ಕಲಬುರಗಿ:ಏ.23: ಇಂಗ್ಲೀಷ್ ಭಾಷೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವ್ಯಾಪಕವಾದ ಮಹತ್ವವವನ್ನು ಹೊಂದಿದೆ. ವಿಶ್ವದ ಎಲ್ಲೆಡೆ ಇದನ್ನು ಬಳಸಲಾಗುತ್ತದೆ. ಆದ್ದರಿಂದ ಇಂಗ್ಲೀಷ್ ಭಾಷೆ ಪರಿಣಾಮಕಾರಿಯಾಗಿ ಕಲಿಯುವದರಿಂದ ಉದ್ಯೋಗಾವಕಾಶಗಳ ಲಭ್ಯತೆ ಹೆಚ್ಚಾಗಿದೆ ಎಂದು ತಜ್ಞ ಇಂಗ್ಲೀಷ್ ತರಬೇತಿದಾರ ದತ್ತು ಹಡಪದ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ಇಂಗ್ಲೀಷ್ ಭಾಷೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವಿಲಿಯಮ್ ಶೇಕ್ಸಪೀಯರ್ ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ‘ಏ-23’ರಂದು ‘ವಿಶ್ವ ಇಂಗ್ಲೀಷ್ ಭಾಷೆ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ. ಇದನ್ನು ಜಾಗತಿಕ ಮಟ್ಟದಲ್ಲಿ 2010ರಿಂದ ಪ್ರಾರಂಭಿಸಲಾಗಿದೆ. ಇಂಗ್ಲೀಷ್ ಭಾಷೆಯು ಬ್ರಿಟಿಷರಿಂದ ನಮ್ಮ ದೇಶದಲ್ಲಿ ವ್ಯಾಪಕವಾಗಿ ಪ್ರಸಾರ ಪಡೆಯಿತು. ಮಾತೃಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆ ಕೂಡಾ ಕಡ್ಡಾಯವಾಗಿ ಕಲಿಯಬೇಕಾಗಿದೆ. ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯವು ಕಠಿಣವೆನಿಸುತ್ತಿದ್ದು, ಇಂಗ್ಲೀಷ್ ಭಾಷಾ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ಕಲಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಕೊಹಿನೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ಶಿಕ್ಷಕರಾದ ಇಸ್ಮೈಲ್ ಅತ್ತಾರ್, ವೀಣಾ ಬಿರಾದಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.