‘ಇಂಗ್ಲೀಷ್ ಎಂಕ್ಲೆಗ್ ಬರ್ಪುಜಿ ಬ್ರೋ… ತುಳುಚಿತ್ರ ಅರುಣಾ ಚಿತ್ರಮಂದಿರದಲ್ಲಿ ಬಿಡುಗಡೆ

ಪುತ್ತೂರು, ಮಾ.೨೭- ಬಹುನಿರೀಕ್ಷಿತ ತುಳು ಚಲನಚಿತ್ರ ‘ಇಂಗ್ಲೀಷ್ ಎಂಕ್ಲೆಗ್ ಬರ್ಪುಜಿ ಬ್ರೋ. ಚಿತ್ರವು ಮಾ.೨೬ರಂದು ಅರುಣಾ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡಿತು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ದೀಪ ಬೆಳಗಿಸಿ ಬಿಡುಗಡೆಗೊಳಿಸಿ, ತುಳು ಭಾಷೆಯು ಉಳಿದು, ಬೆಳೆಯಬೇಕು. ಅದು ಸರ್ವ ವ್ಯಾಪಿಯಾಗಿ ಬೆಳೆಯಬೇಕು. ಅದಕ್ಕಾಗಿ ತುಳು ಚಲನ ಹೆಚ್ಚಾಗಿ ಮೂಡಿಬರಬೇಕು. ಆ ಮೂಲಕ ತುಳು ಭಾಷೆಯ ಮಹತ್ವ ಜನರನ್ನು ತಲುಪಬೇಕು ಎಂದರು.

ಪಡುಮಲೆ ಕೋಟಿ ಚೆನ್ನಯ ಟ್ರಸ್ಟ್‌ನ ಉಪಾಧ್ಯಕ್ಷ ವಿಜಯ ಕುಮಾರ್ ಸೊರಕೆ ಮಾತನಾಡಿ, ತುಳು ಇಂಗ್ಲಿಷ್ ನ ಮಾತೃ. ತುಳುವಿನ ಪದಗಳು ನಮಗರಿವಿಲ್ಲದಂತೆ ಇಂಗ್ಲಿಷ್ ನಲ್ಲಿ ಬಳಕೆಯಾಗುತ್ತಿದೆ. ಇಂಗ್ಲಿಷ್ ತುಳು ಚಿತ್ರವು ೧೦೦ಕ್ಕೂ ಅಧಿಕ ದಿನ ಪ್ರದರ್ಶನ ಪಡೆಯಲಿ ಎಂದರು. ಪಡುಮಲೆ ಕೋಟಿ ಚೆನ್ನಯ ತಾಲೂಕು ಸಮಿತಿಯ ಅಧ್ಯಕ್ಷ ವೇದನಾಥ ಸುವರ್ಣ, ಏಕಕಾಲದಲ್ಲಿ ರಾಜ್ಯದಾದ್ಯಂತ ತೆರೆಕಾಣಲಿರುವ ಇಂಗ್ಲಿಷ್ ಚಿತ್ರವು ಎಲ್ಲವರ್ಗದ ಜನರು ವೀಕ್ಷಿಸುವಂತಾಗಲಿ ಎಂದರು.

ಚಿತ್ರದ ನಟ ದೀಪಕ್ ರೈ ಪಾಣಾಜೆ ಮಾತನಾಡಿ, ಕನ್ನಡ ಚಲನಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ನಿರ್ಮಾಣದ ಪ್ರಥಮ ಚಿತ್ರವಾಗಿದೆ. ತುಳುಚಿತ್ರ ರಂಗದಲ್ಲಿ ಬಹದೊಡ್ಡ ಮೊತ್ತದ ಚಿತ್ರವಾಗಿದೆ. ೨೦೨೦ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವು ಕೊರೋನಾದಿಂದ ವಿಳಂಭವಾಗಿತ್ತು. ಇಂಗ್ಲಿಷ್ ಚಿತ್ರ ವೀಕ್ಷಿಸಿ ತುಳು ಉಳಿಸಬೇಕು ಎಂದರು. ರವಿ ರಾಮಕುಂಜ ಸಂದರ್ಭೋಚಿತವಾಗಿ ಮಾತನಾಡಿದರು. ಚಿತ್ರದ ವ್ಯವಸ್ಥಾಪಕ ನವೀನ್ ಚಂದ್ರ ಉಪಸ್ಥಿತರಿದ್ದರು.

ವಿತರಕ ಬಾಲಕೃಷ್ಣ ಶೆಟ್ಟಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು ಸ್ವಾಗತಿಸಿ, ವಂದಿಸಿದರು.