
ಕೋಲಾರ,ಜು,೧೨-ಕೇಂದ್ರ ಸರ್ಕಾರದ ನೌಕರಿ ಮತ್ತು ದೇಶದಾದ್ಯಂತ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಮಾತೃಭಾಷೆಯ ಜತೆಗೆ ಹಿಂದಿ ಕಲಿಕೆಗೂ ಒತ್ತು ನೀಡಬೇಕಾಗಿದ್ದು, ಇಂಗ್ಲೀಷ್ ಮಾದರಿಯಲ್ಲಿ ಹಿಂದಿಯನ್ನು ಪ್ರಾಥಮಿಕ ಹಂತದಿಂದಲೇ ಕಲಿಸುವ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಹೇಳಿದರು.
ಭಾರತ ಸರ್ಕಾರದ ಉನ್ನತ ಶಿಕ್ಷಣ ವಿಭಾಗ, ಶಿಕ್ಷಣ ಮಂತ್ರಾಲಯ ಕೇಂದ್ರೀಯ ಹಿಂದಿ ಸಂಸ್ಥೆ , ಮೈಸೂರು ಕೇಂದ್ರ, ಕೋಲಾರ ಜಿಲ್ಲಾ ಉಪನಿರ್ದೇಶಕರ ಕಛೇರಿ ಹಾಗೂ ಕೋಲಾರ ಜಿಲ್ಲಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಕೋಲಾರ ಜಿಲ್ಲೆಯ ಹಿಂದಿ ಶಿಕ್ಷಕರಿಗೆ ಹಮ್ಮಿಕೊಂಡಿರುವ ಹತ್ತು ದಿನಗಳ ಪುನಶ್ಚೇತನ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಕ್ಕಳಿಗೆ ಹಿಂದಿ ಕಲಿಸುವುದು ಅತಿ ಮುಖ್ಯವಾಗಿದೆ, ಸರ್ಕಾರಿ ಶಾಲೆಗಳಲ್ಲಿ ೮ನೇ ತರಗತಿ ನಂತರವೇ ಹಿಂದಿ ಕಲಿಕೆ ಆರಂಭವಾಗುವುದರಿಂದ ಅಕ್ಷರಮಾಲೆಯೊಂದಿಗೆ ಕಲಿಕೆ ಅತ್ಯಂತ ಕಷ್ಟಕರವಾಗಿದೆ ಎಂದ ಅವರು, ಇಂಗ್ಲೀಷ್‌ನಂತೆಯೇ ಸರ್ಕಾರಿ ಶಾಲೆಗಳಲ್ಲಿ ಆರಂಭದಿಂದಲೇ ಕನ್ನಡ,ಇಂಗ್ಲೀಷ್ ಜತೆ ಹಿಂದಿಯೂ ಕಲಿಯುವಂತಾದರೆ ಒಳಿತು ಎಂದರು.
ಹಿಂದಿ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ತಿಳಿಸಿ, ಕನ್ನಡ ನಮ್ಮ ಮಾತೃಭಾಷೆ ನಿಜ ಆದರೆ ಇತರೆ ಭಾಷೆಗಳನ್ನೂ ಜತೆಗೆ ಕಲಿಯುವುದರಿಂದ ನಮ್ಮ ಜ್ಞಾನ ಸಂಪತ್ತು ವೃದ್ದಿಗೆ ಸಹಕಾರಿಯಾಗಲಿದ್ದು, ಮಕ್ಕಳಿಗೆ ಹಿಂದಿ ಕಲಿಸಿ, ಕೇವಲ ಬರವಣಿಗೆ ಮಾತ್ರವಲ್ಲ ಮಾತನಾಡುವುದನ್ನು ಕಲಿಸಬೇಕೆಂದರು.
ಕೇಂದ್ರೀಯ ಹಿಂದಿ ಸಂಸ್ಥೆಯ ನಿರ್ದೇಶಕ ಪರಮಾನಂದ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಸಂಪನ್ಮೂಲ ಹಿಂದಿ ಶಿಕ್ಷಕರು ಇದ್ದಾರೆ, ಅವರ ಪರಿಣತಿ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಸಿಗುವಂತಾಗಬೇಕು ಎಂದರು. ಜಿಲ್ಲೆಯ ಎಲ್ಲಾ ಹಿಂದಿ ಶಿಕ್ಷಕರು ಜಿಲ್ಲೆಗೆ ಉತ್ತಮ ಗುಣಮಟ್ಟದ ಫಲಿತಾಂಶ ಪಡೆಯಲು ಈಗಿಂದಲೆ ಪೂರ್ವ ತಯಾರಿ ನಡೆಸಲು ತಿಳಿಸಿ, ಕನ್ನಡದಷ್ಟೆ ಸುಲಲಿತವಾಗಿ ಮಕ್ಕಳು ಮಾತನಾಡುವಂತಾಗಬೇಕು ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ಅತಿ ಮುಖ್ಯ ಎಂದು ಹೇಳಿದರು.
ಜಿಲ್ಲಾ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರಾಮಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಫಲಿತಾಂಶ ಬರಲು ಹಿಂದಿ ಶಿಕ್ಷಕರ ಪ್ರಯತ್ನವೂ ಇದೆ, ಹಿಂದಿ ಭಾಷೆ ಕಡಗಣನೆ ಮಾಡಿದರೆ ಮುಂದಿನ ದಿನಗಳಲ್ಲಿ ಮಕ್ಕಳು ಉತ್ತಮ ಬದುಕು ಕಟ್ಟಿಕೊಳ್ಳಲು ಕಷ್ಟವಾಗುತ್ತದೆ, ಇಂದು ಯಾವುದೇ ಉನ್ನತ ಹುದ್ದೆಗಳಲ್ಲೂ ಹಿಂದಿ ಭಾಷೆ ಪರಿಣಿತಿ ಅಗತ್ಯವಿದೆ ಎಂದು ತಿಳಿಸಿದರು.
ಖಜಾಂಚಿ ವೇಣುಗೋಪಾಲ್ ಸ್ವಾಗತಿಸಿ, ಹಿಂದಿ ಕಲಿಯುವುದರಿಂದ ಬ್ಯಾಂಕಿಂಗ್ ಉದ್ಯೋಗ ಪಡೆಯಲು ಹೆಚ್ಚು ಸಹಕಾರಿಯಾಗಿದೆ, ಮಕ್ಕಳಿಗೆ ಹಿಂದಿಯ ಮಹತ್ವ ತಿಳಿಸಿಕೊಡಬೇಕು, ಇತರೆ ವಿಷಯಗಳಂತೆ ಹಿಂದಿಯನ್ನು ಆಸಕ್ತಿಯಿಂದ ಕಲಿಯುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ , ಕೇಂದ್ರೀಯ ಹಿಂದಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಯೋಗೇಂದ್ರನಾಥ್ ನಾಥ್ ಮಿಶ್ರ, ಉಪನಿರ್ದೇಶಕ ಕಛೇರಿಯ ಇ.ಸಿ.ಓ.ಗಳಾದ ಸಿರಾಜುದ್ದೀನ್ , ಮಾಲೂರು ತಾಲ್ಲೂಕಿನ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷೆ ಜಯಂತಿಮ ಮುಳಬಾಗಿಲು ತಾಲ್ಲೂಕು ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ, ಬಂಗಾರಪೇಟೆಯ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಾಥ್, ಮಾಲೂರು ತಾಲ್ಲೂಕಿನ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಮಮತ, ಶಿಕ್ಷಕರಾದ ಮಂಜುನಾಥ್, ಶ್ರೀನಾಥ್, ಗಂಗಾಧರ್, ಜಮೀರ್ ಪಾಷ, ಪ್ರಭಾ, ಜ್ಯೋತಿ, ಸೋಮಶೇಖರ್ ಮತ್ತಿತರರಿದ್ದರು.