ಇಂಗಳಗಿಯಲ್ಲಿ ಸಂವಿಧಾನ ಜಾಗೃತಿ ಜಾಥಕ್ಕೆ ಭವ್ಯ ಸ್ವಾಗತ

ಕಲಬುರಗಿ:ಜ.28: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯದ್ಯಾಂತ ಸಂವಿಧಾನ ಕುರಿತು ಜಾಗೃತಿ ಮೂಡಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ರವಿವಾರ ಚಿತ್ತಾಪೂರ ತಾಲೂಕಿನ ಇಂಗಳಗಿಗೆ ಅಗಮಿಸುತ್ತಿದ್ದಂತೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಕುಂಭ ಮೇಳದಿಂದ ಭವ್ಯ ಸ್ವಾಗತ ಕೋರಿದರು.

ಕಳೆದ‌ ಜನವರಿ 26 ರಂದು‌ ಜಿಲ್ಲೆಯ 261 ಗ್ರಾಮ‌ ಪಂಚಾಯತಿ, ನಗರ-ಪಟ್ಟಣ ಪ್ರದೇಶದಲ್ಲಿ ಸಂಚರಿಸಿ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ರಥಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ‌ ಪ್ರಿಯಾಂಕ್ ಖರ್ಗೆ ಅವರು ಚಾಲನೆ ನೀಡಿದರು.

ನಂತರ ಗ್ರಾಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂವಿಧಾನ ಕುರಿತು ಶಾಲಾ ಹಂತದಲ್ಲಿ ಆಯೋಜಿಸಿದ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ತಲಾ ಮೂವರು ಅಗ್ರರಿಗೆ ಕ್ರಮವಾಗಿ ಸಂವಿಧಾನ ಪೀಠಿಕೆ ಫ್ರೇಮ್, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ದೇಶದ ಕಟ್ಟ ಕಡೆಯ ವ್ಯಕ್ತಿಯೂ ಸ್ವಾಭಿಮಾನದಿಂದ‌ ಬದುಕಲು ನಮ್ಮ‌ ಸಂವಿಧಾನ ಅವಕಾಶ ನೀಡಿದೆ. ಸಮಾನತೆ, ನ್ಯಾ, ವಾಕ್ ಸ್ವಾತಂತ್ರ್ಯ ನೀಡಿದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಇಡೀ ವಿಶ್ವವೇ ಇಂದು ಕೊಂಡಾಡುತ್ತಿದೆ. ಇಂತಹ ಶ್ರೇಷ್ಠ ಗ್ರಂಥದ ಬಗ್ಗೆ ಅರಿವು ಹೊಂದಬೇಕು. ಅದರ ಮೂಲಾಶಯಗಳನ್ನು ತಿಳಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾದೇವಿ ಹೂಗಾರ, ಉಪಾದ್ಯಕ್ಷೆ ದ್ರೌಪದಿ ಶಾಂತಪ್ಪ, ಡಿ.ಡಿ.ಪಿ‌.ಐ ಸಕ್ರೆಪ್ಪಗೌಡ ಬಿರಾದಾರ, ತಾಲೂಕ ಪಂಚಾಯತ್ ಇ.ಓ. ನೀಲಗಾಂಗಾ ಬಬಲಾದ, ಬಿ.ಇ.ಓ ಸಿದ್ಧವೀರಯ್ಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಚೇತನ ಗುರಿಕರ್, ಸಿ.ಡಿ.ಪಿ.ಓ ವಿಜಯಲಕ್ಣ್ಮೀ ಹೂಗಾರ, ಸನೇಗಾ ಸಹಾಯಕ ನಿರ್ದೇಶಕ ಒಂಡಿತ್ ಶಿಂಧೆ, ಮುಖಂಡರಾದ ಟೋಪಣ್ಣ ಕೋಮಟೆ ಸೇರಿದಂತೆ ಸಾರ್ವಜನಿಕರು, ಶಾಲಾ-ಮಕ್ಕಳು ಇದ್ದರು.

ನಂತರ ಜಾಗೃತಿ ವಾಹನ ಚಿತ್ತಾಪೂರ ತಾಲೂಕಿನ ಕಮರವಾಡಿ, ಹಲಕಟ್ಟಾ, ಕಡಬೂರನಲ್ಲಿ‌ ಸಂಚರಿಸಿ ಅರಿವು ಮೂಡಿಸಿತು.