ಆ.8 ರವರೆಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ:ನದಿ ದಂಡೆಗೆ ತೆರಳದಂತೆ ಜಿಲ್ಲಾಧಿಕಾರಿಗಳ ಮನವಿ

ಕಲಬುರಗಿ,ಆ.5:ಕಲಬುರಗಿ ಜಿಲ್ಲೆಯಲ್ಲಿ ಇದೇ ಆಗಸ್ಟ್ 4 ರಿಂದ 8 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನದಿ ದಂಡೆಗೆ ಸಾರ್ವಜನಿಕರು ಹೋಗದಂತೆ ಹಾಗೂ ಜಾನುವಾರುಗಳನ್ನು ಬಿಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಲಬುರಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮನವಿ ಮಾಡಿದ್ದಾರೆ.

  ಭಾರಿ ಮಳೆಯಿಂದ ಭೀಮಾ ನದಿ ತೀರ, ಸನ್ನತಿ ಬ್ರಿಡ್ಜ್-ಕಂ-ಬ್ಯಾರೇಜ್, ಬೆಣ್ಣೆತೋರಾ ಜಲಾಶಯ ಹಾಗೂ ಕೆಳದಂಡೆ ಮುಲ್ಲಾಮಾರಿ ಜಲಾಶಯಗಳಿಂದ ನದಿಗೆ ನೀರು ಬಿಡುವ ಸಾಧ್ಯತೆಯಿರುವ ಕಾರಣ ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರು ನದಿ ದಂಡೆಗೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ಜಾನುವಾರುಗಳನ್ನು ಸಹ ನದಿಯ ದಂಡೆಗೆ ಬಿಡಬಾರದು  ಎಂದಿದ್ದಾರೆ.

ಪ್ರವಾಹದಿಂದ ನದಿ ದಂಡೆಯ ಗ್ರಾಮಸ್ಥರಿಗೆ ಏನಾದರೂ ಸಮಸ್ಯೆ ಕಂಡು ಬಂದಲ್ಲಿ ತುರ್ತಾಗಿ ಸಹಾಯವಾಣಿ ಸಂಖ್ಯೆ 1077 ಹಾಗೂ ದೂರವಾಣಿ ಸಂಖ್ಯೆ 08472-278677ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.