ಆ. 7 ರಂದು ಕೆ.ಪಿ.ಟಿ.ಸಿ.ಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆ:ನಕಲು ಮುಕ್ತ ಪರೀಕ್ಷೆ ನಡೆಸಲು ಸೂಚನೆ

ಕಲಬುರಗಿ,ಆ.5: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಕಿರಿಯ ಸಹಾಯಕ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೇ ಆಗಸ್ಟ್ 7 ರಂದು ಕಲಬುರಗಿ ಜಿಲ್ಲೆಯ 47 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಟೆಸಲು ಸಿದ್ಧತೆ ಮಾಡಿಕೊಂಡಿದ್ದು, ನಕಲು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಖಡಕ್ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಹಾಗೂ ಇನ್ನಿತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮೊದಲನೇ ಸೆಷನ್ ಪರೀಕ್ಷೆ ಕಲಬುರಗಿ ನಗರದ 29 ಮತ್ತು ತಾಲೂಕಾ ಕೇಂದ್ರಗಳ 18 ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಮಧ್ಯಾಹ್ನ ಅವಧಿಯ ಕನ್ನಡ ಭಾಷಾ ಪರೀಕ್ಷೆ ಕಲಬುರಗಿ ನಗರದ 3 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದರು.
ಆಗಸ್ಟ್ 7 ರಂದು ಬೆಳಿಗ್ಗೆ 10.30 ರಿಂದ 12.30 ಗಂಟೆ ವರೆಗೆ ಮೊದಲನೇ ಅವಧಿಯಲ್ಲಿ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆ ಮತ್ತು ಮಧ್ಯಾಹ್ನ 2 ರಿಂದ 5 ಗಂಟೆ ವರೆಗೆ ಕಿರಿಯ ಸಹಾಯಕರು, ಸಹಾಯಕ ಇಂಜಿನಿಯರ್ (ವಿದ್ಯುತ್), ಸಹಾಯಕ ಇಂಜಿನಿಯರ್ (ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್) ಹಾಗೂ ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಕಿರಿಯ ಸಹಾಯಕ ಹುದ್ದೆಗಳಿಗೆ 19608 ಜನ ಪರೀಕ್ಷೆ ಬರೆಯಲಿದ್ದು, ಕನ್ನಡ ಭಾಷಾ ಪರೀಕ್ಷೆಗೆ 984 ಜನ ಹಾಜರಾಗಲಿದ್ದಾರೆ ಎಂದರು.
ಪರೀಕ್ಷಾ ಮುನ್ನ ಪರೀಕ್ಷಾ ಕೇಂದ್ರದಲ್ಲಿನ ಮೂಲಸೌಕರ್ಯ ಲಭ್ಯವಿರುವ ಬಗ್ಗೆ ಕೇಂದ್ರದ ಮಖ್ಯಸ್ಥರು ಖಾತ್ರಿ ಮಾಡಿಕೊಳ್ಳಬೇಕು. ಪರೀಕ್ಷಾ ದಿನದಂದು ಆವರಣದಲ್ಲಿ ಪರೀಕ್ಷೆಗೆ ಸಂಬಂಧಿತ ವ್ಯಕ್ತಿಗಳು ಹೊರತುಪಡಿಸಿ ಇತರೆ ಯಾವುದೇ ವ್ಯಕ್ತಿಗೆ ಪ್ರವೇಶ ನೀಡಬಾರದು. ಪರೀಕ್ಷೆ ನಕಲಿಗೆ ಯಾರಾದರು ಸಹಕರಿಸಿದಲ್ಲಿ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರೀಕ್ಷೆ ಸುಸೂತ್ರವಾಗಿ ನಡೆಯಲು ಪ್ರತಿ ಕೇಂದ್ರಕ್ಕೆ ಓರ್ವ ಡೆಪ್ಯೂಟಿ ಚೀಫ್, ಓರ್ವ ಪ್ರಶ್ನೆ ಪತ್ರಿಕೆ ಕಸ್ಟಡಿಯನ್, ಇಬ್ಬರು ವಿಶೇಷ ಇನ್ವಿಜಿಲೇಟರ್ ನೇಮಿಸಲಾಗುತ್ತಿದೆ. ಇದಲ್ಲದೆ ಪ್ರತಿ ಕೇಂದ್ರಕ್ಕೆ ಒಬ್ಬರಂತೆ 47 ಜನ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆ ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಾಸ್‍ಪೋರ್ಟ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಇದರಲ್ಲಿ ಯಾವುದಾದರೊಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ವಸ್ತ್ರ ಸಂಹಿತೆ ಅನ್ವಯ, ಸರ್ಜಿಕಲ್ ಮಾಸ್ಕ್ ಕಡ್ಡಾಯ: ಪರೀಕ್ಷೆಗೆ ವಸ್ತ್ರ ಸಂಹಿತೆ ಇದ್ದು, ಪುರುಷ ಅಭ್ಯರ್ಥಿಗಳು ಸಾದಾ ಪ್ಯಾಂಟ್, ಅರ್ಧ ತೋಳಿನ ಶರ್ಟ್ ಧರಿಸಬೇಕು. ಜಿಪ್ ಪಾಕೆಟ್‍ಗಳು, ಪಾಕೆಟ್‍ಗಳು, ಡೊಡ್ಡ ಬಟನ್‍ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆ ಹಾಗೂ ಕುರ್ತಾ ಪೈಜಾಮ್ ಧರಿಸುವಂತಿಲ್ಲ. ಇನ್ನೂ ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಡ್ರೆಸ್ ಧರಿಸಬೇಕು, ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‍ಗಳು ಅಥವಾ ಬಟನ್‍ಗಳನ್ನು ಹೊಂದಿರುವ ಡ್ರೆಸ್ ನಿಷೇಧಿಸಲಾಗಿದೆ. ಶೂ ನಿಷೇಧವಿರುವುದರಿಂದ ಚಪ್ಪಲ್ಲಿ ಅಥವಾ ಸ್ಯಾಂಡಲ್ ಧರಿಸಬೇಕು. ಕುತ್ತಿಗೆ ಸುತ್ತಮುತ್ತ ಯಾವುದೇ ಲೋಹದ ಆಭರಣಗಳು, ಕಿವಿಯೋಲೆ, ಉಂಗುರ, ಕಡಗಗಳ ಧರಿಸಬಾರದು. ಇನ್ನೂ ಪರೀಕ್ಷೆ ಬರೆಯಲು ಬರುವ ಅಬ್ಯರ್ಥಿಗಳು ಕಡ್ಡಾಯವಾಗಿ ಸರ್ಜಿಕಲ್ ಮಾಸ್ಕ್ ಧರಿಸಿಕೊಂಡು ಬರಬೇಕು.
ಮೋಬೈಲ್ ನಿಷೇಧ: ಮೋಬೈಲ್, ಬ್ಲೂಟೂಥ್, ಸ್ಲೈಡ್ ರೂಲ್ಸ್, ವಾಚ್, ವೈಟ್ ಫ್ಲ್ಯೂಯಿಡ್, ವೈರ್‍ಲೆಸ್ ಸೆಟ್, ಪುಸ್ತಕ, ಪೇಪರ್ ಚೀಟಿ ಸೇರಿದಂತೆ ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳು ಪರೀಕ್ಷಾ ಕೇಂದ್ರದೊಳಗೆ ನಿಷೇಧಿಸಲಾಗಿದೆ.
ಸಭೆಯಲ್ಲಿ ಸಹಾಯಕ ಆಯುಕ್ತರು, ತಾಲೂಕಿನ ತಹಶೀಲ್ದಾರರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವೀಕ್ಷಕರು ಇದ್ದರು.