ಆ.7ರಿಂದ ಇಂದ್ರಧನುಷ್ 5.0 ಕಾರ್ಯಕ್ರಮ ಅನುಷ್ಠಾನ: ಡಿಹೆಚ್‍ಒ


ಹೊಸಪೇಟೆ ಆ.5: ಕೇಂದ್ರ ಸರ್ಕಾರದ ಇಂದ್ರಧನುಷ್ 5.0 ಲಸಿಕಾಕರಣ ಕಾರ್ಯಕ್ರಮ ಆ.7ರಿಂದ ಏಕಕಾಲದಲ್ಲಿ ಆರಂಭಗೊಳ್ಳಲಿದ್ದು, ವಿಜಯನಗರ ಜಿಲ್ಲೆಯಲ್ಲೂ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಕೇಂದ್ರ ಸರ್ಕಾರದ ಮಿಷನ್ ಇಂದ್ರಧನುಷ್ 5.0 ಲಸಿಕಾಕರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು ಹಾಗೂ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಲಸಿಕಾಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡಿ ತೀವ್ರತರ ಖಾಯಿಲೆಗಳನ್ನು ಹತೋಟಿಗೆ ತರಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಜಂಬಯ್ಯ ನಾಯಕ ಅವರು ಮಾತನಾಡಿ ಆಗಸ್ಟ್ 7ರ ಸೋಮವಾರದಿಂದ 12 ರವರೆಗೆ ಹಾಗೂ ಸೆಪ್ಟಂಬರ್ 11-16 ಮತ್ತು ಅಕ್ಷೋಬರ್ 9-14 ದಿನಗಳಂದು ಮೂರು ತಿಂಗಳವರೆಗೆ ಲಸಿಕಾಕರಣ ನಡೆಯಲಿದ್ದು, ಪೂರ್ವಭಾವಿಯಾಗಿ ಜಿಲ್ಲೆಯಾದ್ಯಂತ 5 ವರ್ಷದೊಳಗಿನ ಮಕ್ಕಳ ಮತ್ತು ಗರ್ಭಿಣಿಯರ ಸಮೀಕ್ಷೆ ನಡೆಸಿ ಮಾಹಿತಿ ಪಡೆಯಲಾಗಿದೆ. ಒಟ್ಟಾರೆ 4624 ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಟಾಸ್ಕ್‍ಫೋರ್ಸ್ ಸಭೆಯನ್ನು ಸಹ ಆಯೋಜಿಸಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
12 ವಿವಿಧ ರೋಗಗಳ ತಡೆಗೆ ಲಸಿಕೆ: 5 ವರ್ಷದೊಳಗಿನ ಲಸಿಕೆ ವಂಚಿತರಾದ ಮಕ್ಕಳಿಗೆ ಕಾಣಿಸಿಕೊಳ್ಳುವ ಪ್ರಮುಖ ರೋಗ ದಡಾರ ರುಬೆಲ್ಲಾ ಸೇರಿದಂತೆ ಗಂಟಲುಮಾರಿ, ನಾಯಿಕೆಮ್ಮು, ಡಿಪ್ಟೀರಿಯಾ, ಹೆಪಟೈಟಿಸ್, ಹಿಬ್, ಧನುರ್ವಾಯು, ಬಾಲಕ್ಷಯ ರೋಗ, ನಿಮೊಕಾಕಲ್ ನಿಮೋನಿಯಾ, ರೂಟಾ ವೈರಸ್ ಹಾಗೂ ಮೆದುಳು ಜ್ವರ ಬಾಧಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೂರು ಡೋಸ್‍ಗಳನ್ನು ನೀಡಲಾಗುತ್ತದೆ. ಪ್ರಮುಖವಾಗಿ ಸ್ಲಂ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳನ್ನು ಗಮನದಲ್ಲಿರಿಸಿ ಅದರ ಜೊತೆಗೆ ಗ್ರಾಮೀಣ ಭಾಗದಲ್ಲೂ ಇದರ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. 5 ವರ್ಷದೊಳಗಿನ ಮಕ್ಕಳ ಪೋಷಕರು ಹಾಗೂ ಗರ್ಭಿಣಿಯರು ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪ್ರಮಾಣ ಪತ್ರ ಪಡೆಯಲು ಅವಕಾಶ:
ಕೋ-ವಿನ್ ಮಾದರಿಯಲ್ಲಿ ಈ ಲಸಿಕೆಗೂ ನೋಂದಣಿ ಹಾಗೂ ಪ್ರಮಾಣ ಪತ್ರ ಪಡೆಯಲು ಅವಕಾಶ ಇದ್ದು, ಆಶಾ ಕಾರ್ಯಕರ್ತೆಯರ ಸಹಾಯದಿಂದ ಯು-ವಿನ್ ಪೋರ್ಟಲ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಹೂವಿನಹಡಗಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅರುಣ್ ಪಾಲ್ಗೊಂಡಿದ್ದರು.