ಆ. 6-7: ಕಾಂಗ್ರೆಸ್‌ನಿಂದ ಸ್ವಾತಂತ್ರ್ಯೋತ್ಸವ ನಡಿಗೆ

ತುಮಕೂರು, ಜು. ೩೦- ಎಐಸಿಸಿ ಮತ್ತು ಕೆಪಿಸಿಸಿಯ ಕರೆಯಂತೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆ. ೬ ಮತ್ತು ೭ರಂದು ನಗರ ಬ್ಲಾಕ್ ಕಾಂಗ್ರೆಸ್ -೧ ಮತ್ತು ೨ರಲ್ಲಿ ಸ್ವಾತಂತ್ರೋತ್ಸವ ನಡಿಗೆ (ಫ್ರೀಡಂ ಮಾರ್ಚ್) ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಡಾ. ರಫೀಕ್ ಅಹಮದ್ ತಿಳಿಸಿದ್ದಾರೆ.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಆಗಸ್ಟ್ ೩ ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮಜಯಂತಿ ಅಮೃತ ಮಹೋತ್ಸವ, ಫ್ರೀಡಂ ಮಾರ್ಚ್ ಹಾಗೂ ಆಗಸ್ಟ್ ೧೫ ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ ೬ ರಂದು ನಗರ ಬ್ಲಾಕ್-೧ ಅಧ್ಯಕ್ಷರಾದ ಮೆಹಬೂಬ್ ಪಾಷ ಅವರ ನೇತೃತ್ವದಲ್ಲಿ ೭ನೇ ವಾರ್ಡಿನ ಆಗ್ರಹಾರದಿಂದ ಹೊರಡುವ ಸ್ವಾತಂತ್ರ್ಯೋತ್ಸವ ನಡಿಗೆ, ಸಂತೆಪೇಟೆ, ಜಿ.ಸಿ.ಆರ್. ಕಾಲೋನಿ, ಗುಬ್ಬಿಗೇಟ್, ಬಿ.ಜಿ.ಪಾಳ್ಯ ಸರ್ಕಲ್ ನ ಮೂಲಕ ವಾರ್ಡ್ ನಂ ೧೪, ೧೩, ೧೧, ೧೨ರಲ್ಲಿ ಸಂಚರಿಸಿ, ನಜರಾಬಾದ್, ಧಾನ ಪ್ಯಾಲೇಸ್ ಬಳಿ ಅಂತ್ಯವಾಗಲಿದೆ ಎಂದರು.
ಅದೇ ರೀತಿ ಆಟೋರಾಜು ಅವರ ನೇತೃತ್ವದಲ್ಲಿ ಬ್ಲಾಕ್ ಎರಡರ ಫ್ರೀಡಂ ಮಾರ್ಚ್ ಆ. ೭ ರಂದು ಎಸ್.ಐ.ಟಿ.ಯ ಗಂಗೋತ್ರಿ ನಗರದಿಂದ ಪ್ರಾರಂಭಗೊಂಡು ಎಸ್.ಐ.ಟಿ. ಮುಖ್ಯರಸ್ತೆ, ಎಸ್.ಎಸ್.ಪುರಂ ಮೂಲಕ ಹಾದು ಡಾ.ರಾಧಾಕೃಷ್ಣ ರಸ್ತೆಯ ಡಿಡಿಪಿಐ ಕಚೇರಿ ಬಳಿ ಮುಕ್ತಾಯಗೊಳ್ಳಲಿದೆ. ಎರಡು ಬ್ಲಾಕ್‌ಗಳ ಸ್ವಾತಂತ್ರ್ಯ ನಡಿಗೆಯಲ್ಲಿ ಪಕ್ಷದ ಬಾವುಟ ಇರುವುದಿಲ್ಲ. ಬದಲಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಎಲ್ಲಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ದಾರಿಯುದ್ದಕ್ಕೂ ಸಿಗುವ ನಾಗರಿಕರಿಗೆ ತ್ರಿವರ್ಣ ಧ್ವಜವನ್ನು ಹಂಚುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಕುರಿತ ವಿವರಿಸಲಾಗುವುದು. ಅಲ್ಲದೆ ಯುವ ಜನತೆಗೆ ಉಡುಗೊರೆಯನ್ನು ನೀಡಲಾಗುವುದು. ಪಕ್ಷದ ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ವಾರ್ಡ್‌ಗಳ ಬೂತ್ ಮುಖಂಡರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಆಗಸ್ಟ್ ೩ ರಂದು ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಹೊರಡುವವರು ಆಯಾ ಬೂತ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಿಗೆ ಮಾಹಿತಿ ನೀಡಿದರೆ, ಅವರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಿಕೊಡಲಾಗುವುದು. ಹಾಗೆಯೇ ಆಗಸ್ಟ್ ೧೫ ರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಮೆರವಣಿಗೆ ಮತ್ತು ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಹ ಎಲ್ಲಾ ರೀತಿಯ ವ್ಯವಸ್ಥೆಯನ್ನು ನಗರದ ಕಾರ್ಯಕರ್ತರಿಗೆ ಮಾಡಿಕೊಡುವುದಾಗಿ ಅವರು ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ, ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷದ ವತಿಯಿಂದ ಮೂರು ಪ್ರಮುಖ ಕಾರ್ಯಕ್ರಮಗಳನ್ನು ರೂಪಿಸಿದ್ದು, ಆಗಸ್ಟ್ ೩ ರಂದು ಸಿದ್ದರಾಮಯ್ಯ ಜನ್ಮಜಯಂತಿ, ಫ್ರೀಡಂ ಮಾರ್ಚ್ ಮತ್ತು ಆಗಸ್ಟ್ ೧೫ ರಂದು ಸ್ವಾತಂತ್ರ್ಸೋತ್ಸವ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬ್ಲಾಕ್ ಅಧ್ಯಕ್ಷರುಗಳು, ಪ್ರತಿ ವಾರ್ಡಿನ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಒಂದು ಬೂತ್‌ನಿಂದ ಕನಿಷ್ಠ ೧೦ ಜನರು ಪಾಲ್ಗೊಳ್ಳುವಂತೆ ಮಾಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ತುಮಕೂರು ನಗರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ಅನುಕೂಲ ಪಡೆದ ಅನೇಕ ಜನರಿದ್ದಾರೆ. ಅವರನ್ನು ಭೇಟಿಯಾಗಿ ಅವರಿಗೆ ನೀಡಿರುವ ನಿವೇಶನ, ಮನೆ, ರೇಷನ್ ಕಾರ್ಡ್, ಅನ್ನಭಾಗ್ಯ ಯೋಜನೆಯ ಅರಿವು ಮೂಡಿಸಿ. ಹಾಗೆಯೇ ಬಿಜೆಪಿ ಪಕ್ಷದ ಆಡಳಿತ ವೈಫಲ್ಯಗಳನ್ನು ತಿಳಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಜೆ. ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಪರಿಶಿಷ್ಟ ಜಾತಿ ಘಟಕ ಅಧ್ಯಕ್ಷ ಬಿ.ಜಿ. ನಿಂಗರಾಜು, ಯುವ ಕಾಂಗ್ರೆಸನ ಇಲಾಯಿ ಸಿಖಂದರ್, ಶಿವಾಜಿ, ಮೆಹಬೂಬ್ ಪಾಷ, ಆಟೋರಾಜು ಅವರುಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಹಲವರು ಸಲಹೆ ನೀಡಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮರಿಚನ್ನಮ್ಮ, ಡಾ. ಫರ್ಹಾನ ಬೇಗಂ, ಸುಜಾತ, ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಠ್, ಪಾಲಿಕೆ ಸದಸ್ಯರಾದ ಉಬೇದ್‌ವಲ್ಲಾ, ಫೀರ್ ಸಾಬ್, ಯುವ ಘಟಕದ ನೂರ್‌ವುಲ್ಲಾ, ಜಾಕಿರ್ ಪಾಷ, ಉಸ್ನಾ, ಮಹಿಳಾ ಘಟಕ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.