ಆ.31 ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭ

ಶಿವಮೊಗ್ಗ,ಅ.೨೯-ಆಗಸ್ಟ್ ೩೧ ರಿಂದ ಶಿವಮೊಗ್ಗದಿಂದ ವಿಮಾನಗಳು ಪ್ರಾರಂಭವಾಗಲಿವೆ.ವಿಮಾನ ಹಾರಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ವಿಮಾನ ಟಿಕೆಟ್‌ಗಳನ್ನು ಮೊದಲ ದಿನವೇ ಕಾಯ್ದಿರಿಸಲಾಗಿದೆ.
ಆಗಸ್ಟ್ ೩೧ ಶಿವಮೊಗ್ಗಕ್ಕೆ ಐತಿಹಾಸಿಕ ದಿನ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬೆಳಗ್ಗೆ ೯.೦೫ಕ್ಕೆ ಆಗಮಿಸುವ ವಿಮಾನವು ೧೧.೦೫ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಲಿದೆ. ಬೆಂಗಳೂರಿನಿಂದ ಹಲವು ಸಚಿವರು, ಮುಖಂಡರು ಬರಲಿದ್ದಾರೆ. ಮತ್ತೆ ೧೧.೨೫ಕ್ಕೆ ಬೆಂಗಳೂರಿಗೆ ವಿಮಾನ ಹೊರಡಲಿದೆ.
೭೭೫ ಎಕರೆ ಪ್ರದೇಶದಲ್ಲಿ ಮನಮೋಹಕ ಅತ್ಯಾಧುನಿಕ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ.
ಬೆಂಗಳೂರಿನ ಹೊರತಾಗಿ, ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯದ ಅತಿ ಉದ್ದದ ರನ್‌ವೇ ಹೊಂದಿರುವ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಆ.೩೧ರಿಂದ ವಿಮಾನ ಹಾರಾಟದ ಹಿನ್ನೆಲೆ ಪರಿಶೀಲನೆ ನಡೆಸಿ ಕೆಎಸ್ ಐಡಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನ ಹಾರಾಟಕ್ಕೆ ಅನುಮತಿ ಪಡೆದಿರುವ ಇಂಡಿಗೋ ಜುಲೈ ೨೬ ರಿಂದ ಟಿಕೆಟ್ ಬುಕ್ಕಿಂಗ್ ಆರಂಭಿಸಿದೆ.
ಶಿವಮೊಗ್ಗದಿಂದ ಬೆಂಗಳೂರು ವಿಮಾನದಲ್ಲಿ ಬಹುತೇಕ ಸೀಟುಗಳು ಭರ್ತಿಯಾಗಿವೆ. ಟಿಕೆಟ್ ದರದಲ್ಲೂ ಭಾರಿ ಏರಿಕೆಯಾಗಿದೆ. ಪ್ರಯಾಣಿಕರು ವಿಮಾನ ಹತ್ತಲು ಉತ್ಸುಕರಾಗಿದ್ದಾರೆ
ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ದರ ೨,೬೯೯ ರೂಪಾಯಿ ಇತ್ತು, ಆದರೆ ಬೇಡಿಕೆ ಹೆಚ್ಚಾದ ಕಾರಣ ಅದನ್ನು ೧೪,೭೬೭ ರೂಪಾಯಿಗೆ ಹೆಚ್ಚಿಸಲಾಗಿದೆ. ದರ ಏರಿಕೆಯಾದರೂ ಪ್ರಯಾಣಿಕರು ಟಿಕೆಟ್ ಮುಂಗಡ ಬುಕ್ ಮಾಡಿದ್ದಾರೆ.