ಆ.31 ರಿಂದ ಗಣೇಶೋತ್ಸವ ಆಚರಣೆಗೆ ತೀರ್ಮಾನ

ಮಧುಗಿರಿ, ಜು. ೨೦- ಪಟ್ಟಣದಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಆಗಸ್ಟ್ ೩೧ರಿಂದ ೯ ದಿನಗಳ ಕಾಲ ಗಣೇಶೋತ್ಸವವನ್ನು ಸಾರ್ವಜನಿಕರ ಸಹಕಾರದೊಂದಿಗೆ ಆಚರಿಸಲು ಪುರಸಭಾ ಅಧ್ಯಕ್ಷ ತಿಮ್ಮರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಐತಿಹಾಸಿಕ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ೩ ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಸರಳವಾಗಿ ಗಣಪತಿಯನ್ನು ಪ್ರತಿಷ್ಠಾಪಿಸಿ ವಿಸರ್ಜಿಸಲಾಗಿತ್ತು. ಈ ಬಾರಿ ಸಾರ್ವಜನಿಕರ ಸಹಕಾರದಿಂದ ೯ ದಿನಗಳ ಕಾಲ ಪ್ರತಿಷ್ಠಾಪನೆ, ವಿಸರ್ಜನೆ ಹಾಗೂ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಚುನಾಯಿತ ಜನಪ್ರತಿನಿಧಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲು ತೀರ್ಮಾನಿಸಲಾಯಿತು.
ವಿದ್ಯಾಗಣಪತಿಯನ್ನು ಈ ಬಾರಿ ಶ್ರೀ ಮಲ್ಲೇಶ್ವರಸ್ವಾಮಿ ಮತ್ತು ಶ್ರೀ ವೆಂಕಟರಮಣಸ್ವಾಮಿ ದೇವಾಲಯ ಮಧ್ಯಭಾಗದಲ್ಲಿ ಬಾಲಗಂಗಾಧರ್ ತಿಲಕ್ ಮಹಾ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.
ಸಭೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಡಿ. ಜಿ. ಶಂಕರನಾರಾಯಣಶೆಟ್ಟಿ, ಎಂ. ವಿ .ಗೋವಿಂದರಾಜು, ಸದಸ್ಯ ಲಾಲಾಪೇಟೆ ಮಂಜುನಾಥ್, ಮಾಜಿ ಸದಸ್ಯ ಅರ್.ಎಲ್.ಎಸ್. ರಮೇಶ್, ಪುರಸಭೆ ಉಪಾಧ್ಯಕ್ಷ ಆನಂದಕೃಷ್ಣ, ಮುಖಂಡರಾದ ಪಾಂಡುರಂಗಾರೆಡ್ಡಿ, ಎಂ.ವಿ. ಮೂಡ್ಲಗಿರೀಶ್, ಎಂ. ಜಿ. ಸುದರ್ಶನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.