
ಲಕ್ಷ್ಮೇಶ್ವರ,ಆ.25: ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಈ ಧೋರಣೆಯನ್ನು ಖಂಡಿಸಿ ಆಗಸ್ಟ್ 28ರಂದು ಸೋಮವಾರ ಲಕ್ಷ್ಮೇಶ್ವರ ತಾಲ್ಲೂಕು ಬಂದ್‍ಗೆ ಕರೆ ನೀಡಲಾಗಿದೆ' ಎಂದು ತಾಲ್ಲೂಕಾ ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ ಹೇಳಿದರು. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು
ಮಳೆ ಇಲ್ಲದ ಕಾರಣ ಈ ವರ್ಷದ ಮುಂಗಾರು ಹಂಗಾಮು ಸಂಪೂರ್ಣ ವಿಫಲವಾಗಿದೆ. ಇಂಥ ಸಂದಿಗ್ದ ಸ್ಥಿತಿಯಲ್ಲಿ ರೈತರ ಖಾತೆಗೆ ಜಮೆ ಆಗುವ ಬೆಳೆ ವಿಮೆ ಪರಿಹಾರ, ಸಂಧ್ಯಾಸುರಕ್ಷ ಮಾಸಾಶನ ನರೇಗಾ ಕೂಲಿಯನ್ನು ಸಹ ಬ್ಯಾಂಕಿನವರು ಜಮೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಬಹಳಷ್ಟು ತೊಂದರೆ ಆಗಿದೆ. ಈ ಕುರಿತು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡ ಪ್ರಯೋಜನವಾಗಿಲ್ಲ. ಕಾರಣ ರೈತ ತನ್ನ ಸಮಸ್ಯೆಗಳ ಪರಿಹಾರಕ್ಕಾಗಿ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದ್ದಾನೆ. ರೈತರ ಈ ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಗಳು, ಶಾಸಕರು, ಮಾಜಿ ಶಾಸಕರು ಭಾಗವಹಿಸುವಂತೆ ಮನವಿ ಮಾಡಲಾಗುವುದು’ ಎಂದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಟಾಕಪ್ಪ ಸಾತಪುತೆ, ಕಿಸಾನ್ ಜಾಗೃತಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಲಿಂಗಶೆಟ್ಟಿ, ಕರಿಯಪ್ಪ ಹುರಕನವರ, ಖಾನ್‍ಸಾಬ್ ಸೂರಣಗಿ, ಆನಂದ ಅಮರಶೆಟ್ಟಿ ಇದ್ದರು.
**