ಆ. 21 ರಿಂದ ವಿಶೇಷ ದ್ವಿತೀಯ ಪಿ.ಯು.ಸಿ ಪೂರಕ ಪರೀಕ್ಷೆ ಆ. 10ರ ವರೆಗೆ ನೋಂದಣಿಗೆ ಅವಕಾಶ

ಕಲಬುರಗಿ,ಜು.28: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2022-23 ಮತ್ತು ಅದಕ್ಕೂ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಬಾರಿ ವಿಶೇಷ ಪೂರಕ ಪರೀಕ್ಷೆ (ಎರಡನೇ ಬಾರಿ) ಆಗಸ್ಟ್ 21 ರಿಂದ ಸೆಪ್ಟೆಂಬರ್ 2ರ ವರೆಗೆ ಆಯೋಜಿಸಿದ್ದು, ಅನುತೀರ್ಣರಾದ ವಿದ್ಯಾರ್ಥಿಗಳು ತಮ್ಮ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕಿಸಿ ಆಗಸ್ಟ್ 10 ರೊಳಗೆ ಹೆಸರು‌ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

ಇದೇ ಪ್ರಥಮ ಬಾರಿಗೆ ವಿಶೇಷ ಪೂರಕ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಈ ಸದಾವಕಾಶ ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ತಿಳಿಸಿದ್ದಾರೆ.

ಇನ್ನು ಈ ವಿಶೇಷ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶವನ್ನು ತಿರಸ್ಕರಿಸುವಂತಿಲ್ಲ. ಪರೀಕ್ಷೆಗೆ ಸಂಬಂಧಿಸಿದ ಸುತ್ತೋಲೆ ಹಾಗೂ ವೇಳಾಪಟ್ಟಿಯನ್ನು ಮಂಡಳಿಯ ಜಾಲತಾಣ https://kseab.karnataka.gov.in ನಲ್ಲಿ‌ ವೀಕ್ಷಿಸಬಹುದಾಗಿದೆ.