
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.10: ಧೀರ್ಘಾವಧಿಯಿಂದ ಬಾಕಿ ಇರುವ ತಮ್ಮ ಬೆಳೆ ಸಾಲವನ್ನು ಶೇ 50 ರಷ್ಟುನ್ನು ಒಂದೇ ಬಾರಿ ತೀರುವಳಿ ಯೋಜನೆಯಡಿ ಪಾವತಿಸಿಕೊಂಡು ಸಾಲದಿಂದ ಮುಕ್ತರನ್ನಾಗಿ ಮಾಡುವಂತೆ ಕಳೆದ ಹಲವು ತಿಂಗಳಿಂದ ನಗರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಮುಂದೆ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಹೋರಾಟದಲ್ಲಿ ಪಾಲ್ಗೊಳ್ಳಲು ಭಾರತೀಯ ಕಿಸಾನ್ ಒಕ್ಕೂಟದ ರಾಕೇಶ್ ಟಿಕಾಯತ್ ಆ 21 ರಂದು ಬಳ್ಳಾರಿಗೆ ಆಗಮಿಸುತ್ತಿದ್ದಾರೆ.
ಹೋರಾಟ ನಡೆಸುತ್ತಿರುವ ರೈತ ಮುಖಂಡರ ಜೊತೆ
ಶಾಸಕ ಬಿ.ಆರ್.ಪಾಟೀಲ್ ನಿನ್ನೆ ಸಂಜೆ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಂದು ಹೋರಾಟದಲ್ಲಿ
ಟಿಕಾಯತ್ ಅವರ ಜೊತೆ ಎಐಕೆಎಂಕೆಎಸ್ ಸಹ ಸಂಚಾಲಕಿ ಎಸ್.ಝಾನ್ಸಿ, ಕಿಸಾನ್ ಸಂಘರ್ಷ ಸಮಿತಿ ಅಧ್ಯಕ್ಷೆ ಡಾ. ಸುನಲೆಂ ಸೇರಿದಂತೆ ಹಲವು ರಾಷ್ಟ್ರೀಯ, ರಾಜ್ಯ ನಾಯಕರು ಆಗಮಿಸಲಿದ್ದಾರೆ
ರೈತರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ, ಹೋರಾಟನಿರತ ರೈತರಿಗೆ ನೈತಿಕ ಬೆಂಬಲ ನೀಡಲಿದ್ದಾರೆ. ಇದಕ್ಕೂ ಮುನ್ನ ನಗರದ ಇಂದಿರಾ ವೃತ್ತದಿಂದ ಎತ್ತಿನ ಗಾಡಿ ಮೂಲಕ ಮೆರವಣಿಗೆ ನಡೆಸಲಾಗುವುದೆಂದು ತಿಳಿಸಿದರು.
ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿರುದ್ಧ ಸತತ 230 ದಿನಗಳಿಂದ ನಿರಂತರವಾಗಿ ಹೋರಾಟ ಹಮ್ಮಿಕೊಂಡು ತಾವು ಪಡೆದ ಸಾಲ ಕಟ್ಟಲು ಒಂದೇ ಬಾರಿ ತೀರುವಳಿ ಮಾಡುವ ಅವಕಾಶ ನೀಡಿ ಎಂದು ಕೋರುತ್ತಿದ್ದಾರೆ. ಆದರೆ, ಬ್ಯಾಂಕಿನ ಅಧಿಕಾರಿ ವರ್ಗ ರೈತರ ದನಿಯನ್ನೇ ಆಲಿಸಲು ಸಿದ್ಧವಿಲ್ಲ. ಬೇಕಾಬಿಟ್ಟಿ ಬಡ್ಡಿ ವಿಧಿಸಿ ರೈತರಿಂದ 50-60 ಪಟ್ಟು ಹೆಚ್ಚಿನ ವಸೂಲಾತಿಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ಒಬ್ಬ ರೈತ 1 ಲಕ್ಷ ಸಾಲ ಪಡೆದಿದ್ದರೆ ಇದರ ಮೊತ್ತ ಈಗ 25 ಲಕ್ಷ ಆಗಿದೆ. ಇದೇ ರೀತಿ 10 ಲಕ್ಷ ಪಡೆವರ ಸಾಲದ ಮೊತ್ತ 50-60 ಲಕ್ಷ ರೂ. ಆಗಿದೆ. ಹೀಗೆ ಆದರೆ, ರೈತರು ಸಾಲ ವಾಪಸ್ ಕಟ್ಟುವುದು ಕಷ್ಟ. ಭೂಮಿ ಮಾರಿದರೂ ಅಷ್ಟು ಹಣ ಹೊಂದಿಸಲಾಗದು. ಇದೇ ಕಾರಣಕ್ಕೆ ರೈತರಿಗೆ ಒಂದೇ ಬಾರಿ ತೀರುವಳಿ ಮಾಡುವ ಅವಕಾಶ ನೀಡಿ. ಬಡ್ಡಿ ಕಡಿತಮಾಡಿ, ಇಲ್ಲವೇ ಕಡಮೆಮಾಡಿ ಎಂದು ಕೋರಿ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ, ಬ್ಯಾಂಕ್‍ನವರು ಇತ್ತ ಗಮನ ಹರಿಸುತ್ತಿಲ್ಲ ಎಂದು ಅವರು ತಿಳಿಸಿದರು.ರಾಜ್ಯದ 22 ಜಿಲ್ಲೆಗಳಲ್ಲಿ ಇರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಿಂದ ಸುಮಾರು 30-40 ಲಕ್ಷ ರೈತರು ಸಾಲ ಪಡೆದುಕೊಂಡಿದ್ದಾರೆ. ಅಲ್ಲಿಗೆ ಅವರ ಕುಟುಂಬಸ್ಥರು ಸೇರಿ 1.2 ಕೋಟಿಯಷ್ಟು ಜನರು ಸದ್ಯ ಶೋಷಣೆಗೆ ಈಡಾಗುತ್ತಿದ್ದಾರೆ. ಇಂತಹ ರೈತರ ಪರ ಸರ್ಕಾರ ನಿಲ್ಲಬೇಕೆಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಯಾರಿಗೂ ಹೆದರುತ್ತಿಲ್ಲ.ಅಂತಹವರನ್ನು ಮಣಿಸಿದ್ದು ದೆಹಲಿಯಲ್ಲಿ ನಡೆದ ರೈತ ಹೋರಾಟ. ಅ ಹೋರಾಟದಲ್ಲಿ ಭಾಗಿಯಾದ ಬಹುತೇಕ ರೈತ ನಾಯಕರು ಈ ಹೋರಾಟದಲ್ಲಿ ಭಾಗಿ ಆಗುವರೆಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಆರ್.ಮಾಧವರೆಡ್ಡಿ ಕರೂರು, ವಕೀಲ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, ಆಲಿಬಾಬಾ, ವಿರೂಪಾಕ್ಷ ಅಸುಂಡಿ ಸೇರಿದಂತೆ ಇತರರು ಇದ್ದರು.