ಆ.16ರಂದು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.14:- ತಾಲೂಕಿನ ಹೇಮಾವತಿ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಲು ಮತ್ತು ರೈತರ ಕೃಷಿ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಲು ಮುಂದಾಗುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಆ.16ರ ಬುಧವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ರೈತರ ಬೃಹತ್ ಪ್ರತಿಭಟನೆ ನಡೆಸಲು ತಾಲೂಕು ರೈತಸಂಘ ತೀರ್ಮಾನಿಸಿದೆ.
ರೈತ ಮುಖಂಡರಾದ ಕೆ.ಆರ್.ಜಯರಾಂ ಮತ್ತು ಎಂ.ವಿ.ರಾಜೇಗೌಡ ಅವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ನಡೆಸಿದ ರೈತ ಮುಖಂಡರು ನೀರು ಮತ್ತು ವಿದ್ಯುತ್‍ಗಾಗಿ ಬೀದಿ ಹೋರಾಟಕ್ಕಿಳಿಯಲು ತೀರ್ಮಾನಿಸಿದರು.
ಸಭೆಯಲ್ಲಿ ಮಾತನಾಡಿದ ರೈತ ಮುಖಂಡ ಕೆ.ಆರ್.ಜಯರಾಂ ನೀರು ಮತ್ತು ವಿದ್ಯುತ್ ರೈತರ ಬದುಕಿನ ಎರಡು ಆಧಾರ ಸ್ಥಂಭಗಳು. ದೇವರ ಕೃಪೆಯಿಂದ ಒಂದಷ್ಟು ನೀರು ಹೇಮಾವತಿ ಜಲಾಶಯಕ್ಕೆ ಹರಿದು ಬಂದಿದೆ. ದೇವರು ಕೊಟ್ಟರೂ ರಾಜ್ಯ ಸರ್ಕಾರ ಕಾಲುವೆಗಳ ಮುಖಾಂತರ ರೈತರ ಹೊಲಗದ್ದೆಗಳಿಗೆ ನೀರು ಹರಿಸುತ್ತಿಲ್ಲ. ಕೆ.ಆರ್.ಎಸ್ ಅಣೆಕಟ್ಟೆಯ ವ್ಯಾಪ್ತಿಯ ರೈತರಿಗೆ ನೀರು ಬಿಡಲಾಗಿದೆ. ಆದರೆ ಹೇಮಾವತಿ ಬಯಲಿನ ರೈತರಿಗೆ ನೀರು ಬಿಡದೆ ಸತಾಯಿಸಲಾಗುತ್ತಿದೆ. ಹೇಮಾವತಿ ಜಲಾನಯನ ಪ್ರದೇಶದ ರೈತರು ರಾಜ್ಯ ಸರ್ಕಾರಕ್ಕೆ ಬಗೆದಿರುವ ದ್ರೋಹವಾದರೂ ಏನು? ಕೆ.ಆರ್.ಎಸ್ ಮತ್ತು ಹೇಮಾವತಿ ಜಲಾಶಯದ ರೈತರ ನಡುವೆ ತಾರತಮ್ಯಕ್ಕೆ ಕಾರಣವೇನು? ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಹೇಮಾವತಿ ಜಲಾಶಯ ವ್ಯಾಪ್ತಿಗೆ ಸೇರಿದ್ದರೂ ನೀರಿನ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದ ಕೆ.ಆರ್.ಜಯರಾಂ ಈಗಾಗಲೇ ಮುಂಗಾರು ಹಂಗಾಮಿನ ಕಾಲಾವಧಿ ಮುಕ್ತಾಯಕ್ಕೆ ಬರುತ್ತಿದೆ. ಸಕಾಲದಲ್ಲಿ ರೈತರ ಭೂಮಿಗೆ ನೀರು ಹರಿಸದಿದ್ದರೆ ಭಿತ್ತನೆ ಕಾರ್ಯ ಅಸಾಧ್ಯ. ನೀರಿನ ಹೋರಾಟಕ್ಕೆ ರೈತರನ್ನು ಸಜ್ಜುಗೊಳಿಸಲು ರೈತಸಂಘ ಗ್ರಾಮ ಮಟ್ಟದಲ್ಲಿ ಕರಪತ್ರಗಳನ್ನು ಹಂಚಿ ರೈತರನ್ನು ಜಾಗೃತಗೊಳಿಸಲಿದೆ ಎಂದರು.
ನೀರು ಮತ್ತು ವಿದ್ಯುತ್ ವಿಚಾರದಲ್ಲಿ ಸರ್ಕಾರದ ನೀತಿಗಳು ರೈತರ ಹಿತಾಸಕ್ತಿಗೆ ವಿರುದ್ದವಾಗಿವೆ. ರೈತರ ಅರಿವಿಗೆ ಬರದಂತೆ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಕೃಷಿ ಪಂಪ್ ಸೆಟ್‍ದಾರರು ತಮ್ಮ ತಮ್ಮ ಪಂಪ್ ಸೆಟ್ ಖಾತೆಯೊಂದಿಗೆ ಆಧಾರ್ ನಂ ಲಿಂಕ್ ಮಾಡುವಂತೆ ಕೋರಲಾಗುತ್ತಿದೆ. ಇದರ ಹಿಂದೆ ಪ್ರತಿ ಪಂಪ್ ಸೆಟ್ ಗೂ ಮೀಟರ್ ಅಳವಡಿಸುವ ವ್ವಯಸ್ಥಿತ ಹುನ್ನಾರ ಅಡಗಿದೆ. ರೈತರು ಯಾವುದೇ ಕಾರಣಕ್ಕೂ ವಿದ್ಯುತ್ ಇಲಾಖೆಯೊಂದಿಗೆ ಆಧಾರ್ ಲಿಂಕ್ ಮಾಡಬಾರದೆಂದು ಕರೆ ನೀಡಿದ ಕೆ.ಆರ್.ಜಯರಾಂ ಗ್ಯಾಟ್ ಒಪ್ಪಂದದ ಪರಿಣಾಮ ಇದೀಗ ರೈತರ ಮೇಲಾಗುತ್ತಿದೆ. ಜನದ್ರೋಹಿಗಳು ರಾಜಕಾರಣಿಗಳು ಬಂಡವಳಶಾಹಿಗಳೊಂದಿಗೆ ಕೈ ಜೋಡಿಸಿ ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಶಾಸನ ಸಭೆಗಳಲ್ಲಿ ಕುಳಿತು ರೈತ ವಿರೋಧಿ ಕಾಯ್ದೆಗಳನ್ನು ರೂಪಿಸುತ್ತಿದ್ದಾರೆಂದರು. ರೈತರ ಭೂಮಿಯ ಮೇಲೆ ನಿರ್ಮಾಣವಾದ ಹೆದ್ದಾರಿಗಳಲ್ಲಿ ರೈತರು ಎತ್ತಿನಗಾಡಿಗಳು ಮತ್ತು ಟ್ರ್ಯಾಕ್ಟರ್ ಗಳು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸದಂತೆ ನಿಯಮ ಮಾಡುತ್ತಿದ್ದಾರೆ. ನಮ್ಮ ರಸ್ತೆಗಳಲ್ಲಿ ತಿರುಗಾಡಲು ನಾವೇ ಟೋಲ್ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಹೆದ್ದಾರಿಗಳಲ್ಲೂ ರೈತರು ಉಚಿತವಾಗಿ ಸಂಚರಿಸುವ ಹೊಸ ಟೋಲ್ ನೀತಿ ಜಾರಿಯಾಗಬೇಕಾಗಿದೆ ಎಂದ ಕೆ.ಆರ್.ಜಯರಾಂ ಮನ್ ಮುಲ್ ಹಗರಣದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದರು. ರೈತರು ಎಚ್ಚೆತ್ತುಕೊಳ್ಳದಿದ್ದರೆ ಬ್ಯಾಂಕುಗಳ ವಿಲೀನ ಮಾದರಿಯಲ್ಲಿ ಎಲ್ಲಾ ಸಹಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಿ ಅನಂತರ ಅವುಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಹುನ್ನಾರ ನಡೆಯುತ್ತಿದೆ. ಹಾಲು ಉತ್ಪಾದಕ ರೈತರು ಎಚ್ಚೆತ್ತುಕೊಳ್ಳದಿದ್ದರೆ ನಂದಿನಿಯನ್ನು ಅಮೂಲ್ ಜೊತೆ ವಿಲೀನಗೊಳಿಸಿ ಅನಂತರ ನೆಸ್ಲೆಯಂತಹ ಖಾಸಗಿ ಕಂಪನಿಗಳಿಗೆ ಅದನ್ನು ಮಾರಿಬಿಡುತ್ತಾರೆ ಎಂದು ಎಚ್ಚರಿಸಿದರು.
ರೈತ ವಿರೋಧಿ ನೀತಿಯ ವಿರುದ್ದ ರೈತರನ್ನು ಜಾಗೃತಿಗೊಳಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿ ರೈತಸಂಘ ಮೊದಲ ಹಂತದಲ್ಲಿ ಆಗಸ್ಟ್ 16 ರಂದು ನೀರು ಮತ್ತು ವಿದ್ಯುತ್ ಗಾಗಿ ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಕೆ.ಆರ್.ಜಯರಾಂ ತಿಳಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಮಡುವಿನಕೋಡಿ ಪ್ರಕಾಶ್, ಚೌಡೇನಹಳ್ಳಿ ಕೃಷ್ಣೇಗೌಡ, ಅಕ್ಕಿ ಮಂಚನಹಳ್ಳಿ ಹೊನ್ನೇಗೌಡ, ಹಿರೀಕಳಲೆ ಬಸವರಾಜು ಸೇರಿದಂತೆ ಹಲವರು ಸಭೆಯಲ್ಲಿದ್ದು ಮಾತನಾಡಿದರು.