ಆ. 15 ರಿಂದ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ:ಕೃಷ್ಣ ಬೈರೇಗೌಡ

ಕಲಬುರಗಿ,ಜು.31: ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿ ಇ-ಆಫೀಸ್ ಅನುಷ್ಠಾನಗೊಳಿಸಬೇಕುಮ ಇನ್ನು ಮುಂದೆ ರಾಜ್ಯ ಎಲ್ಲಾ ಡಿ.ಸಿ. ಕಚೇರಿಯಿಂದ ಆಗಸ್ಟ್ 15 ರಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಪತ್ರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಒಂದು ಪ್ರಕರಣದಲ್ಲಿ ಗ್ರಾಮ ಪಂಚಾಯತಿಯ ಸ್ವಚ್ಛತಾ ಸಂಕೀರ್ಣಕ್ಕೆ ಜಮೀನು ನೀಡಲು ಎರಡು ವರ್ಷ ಬೇಕೆ. ಮೊನ್ನೆ ಈ ಕಡತ ಇ-ಆಫೀಸ್ ನಲ್ಲಿ ನನ್ನ ಲಾಗಿನ್ ಗೆ ಬಂದಾಗ 2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ ಎಂದರು.

ಇ-ಆಫೀಸ್ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಲ್ಲಿಂದಲು ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಶಾಲೆ, ಗ್ರಾಮ ಪಂಚಾಯತಿಗೆ ಜಮೀನು ನೀಡಲು ಇಷ್ಟೊಂದು‌ ವಿಳಂಬವೇಕೆ, ಇದರಲ್ಲಿ ಕಾಯುವಂತದೇನಿದೆ ಎಂದು ಡಿ.ಸಿ. ಅವರನ್ನು ಪ್ರಶ್ನಿಸಿದರು.

ಕಂದಾಯ ಇಲಾಖೆಯ
ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಮಾತನಾಡಿ, ಇ-ಕಚೇರಿ ಅನುಷ್ಟಾನಕ್ಕೆ ಕೂಡಲೆ ಎಲ್ಲಾ ಜಿಲ್ಲಾಧಿಕಾರಿಗಳು, ಕೆಸ್ವಾನ್ ಸಂಪರ್ಕ ಪಡೆದುಕೊಳ್ಳಬೇಕು ಮತ್ತು ತಹಶೀಲ್ದಾರ ಕಚೇರಿ ಹಂತದಲ್ಲಿಯೂ ಇದನ್ನು ಅನುಷ್ಟಾನಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಡಿ.ಸಿ. ಗಳಿಗೆ ಸೂಚಿಸಿದರು.

ಸರ್ವೆ ಡಿಸ್ಪೂಟ್ ಪ್ರಕರಣಗಳ ಚರ್ಚೆಯಲ್ಲಿ 2-3 ವರ್ಷದಿಂದ ಸರ್ವೆಗೆ ಬಾಕಿ ಏಕಿವೆ ಎಂದು ಡಿ.ಡಿ.ಎಲ್.ಆರ್. ಗಳನ್ನು ಸಚಿವರು ಪ್ರಶ್ನಿಸಿದಾಗ, ಕೆಲ‌ ತಾಂತ್ರಿಕ ಸಮಸ್ಯೆಗಳ ಕಾರಣ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಡಿ.ಡಿ.ಎಲ್.ಆರ್. ಗಳು ಸಚಿವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ ಮಾತನಾಡಿ, ಈ ಕುರಿತು ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗುವುದು. ಅದರಂತೆ ಕ್ರಮವಹಿಸಿ ಎಂದು ಚರ್ಚೆಗೆ ತೆರೆ ಎಳೆದರು.