ಆ.15 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಅದ್ಧೂರಿಯಾಗಿ ಆಚರಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಬೀದರ ಜು. 31: 75ನೇ ಸ್ವಾತಂತ್ರ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್.15 ರಂದು ಬರುವ ಸ್ವಾಂತ್ರ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಆಚರಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಅವರು ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಾಂತ್ರ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಗಸ್ಟ್.15 ರಂದು ಬೆಳಿಗ್ಗೆ 8 ಗಂಟೆಗೆ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳು ಹಾಗೂ ಇತರೆ ಸಂಘ ಸಂಸ್ಥೆಗಳು ತಮ್ಮ ಕಟ್ಟಡಗಳ ಮೇಲೆ ಧ್ವಜಾರೋಹಣ ಮಾಡುವುದು ಹಾಗೂ ದೀಪಲಂಕಾರ ಮಾಡುವಂತೆ ತಿಳಿಸಿದರು.

ಧ್ವಜಾರೋಹಣದ ನಂತರ 8.45 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಅಧಿಕಾರಿ ಸಿಬ್ಬಂದಿಗಳು, ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು ಭಾಗವಹಿಸಬೇಕು. ಅಂದು ಸರ್ಕಾರಿ ಕಚೇರಿಗಳ ಮೇಲೆ ದೀಪಲಾಂಕಾರ ವ್ಯವಸ್ಥೆ ಮಾಡುವುದು, ನಗರಸಭೆ ವತಿಯಿಂದ ನಗರದ ಮುಖ್ಯ ವೃತ್ತಗಳಲ್ಲಿ ರಾಷ್ಟ್ರ ಧ್ವಜದ ಮೂರು ಬಣ್ಣಗಳ ದೀಪಲಾಂಕಾರದ ವ್ಯವಸ್ಥೆ ಮಾಡುವುದು ಹಾಗೂ ನಗರದ ಮರ್ಚಟ್ ಅಸೋಸಿಯೇಷನ್ ಅವರೊಂದಿಗೆ ಸಂಪರ್ಕಿಸಿ ಪ್ರತಿಯೊಂದು ಅಂಗಡಿಯ ಮೇಲೆಯೂ ಸಹ ದೀಪಲಂಕಾರ ಹಾಗೂ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಕ್ರಮ ವಹಿಸಲು ನಗರ ಸಭೆ ಆಯುಕ್ತರಿಗೆ ಸೂಚಿಸಿದರು.

ಆಗಸ್ಟ್.4 ರಿಂದ 14 ರವರೆಗೆ ಎಲ್ಲಾ ಶಾಲಾ ಕಾಲೇಜುಗಳ ತರಗತಿವಾರು ಆಜಾದಿಕಾ ಅಮೃತ ಮಹೋತ್ಸವ ಕುರಿತು ನಿಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ನಾಟಕ ಸ್ಪರ್ಧೆಗಳನ್ನು ಏರ್ಪಡಿಸಬೇಕೆಂದು ಹೇಳಿದರು.

ಧ್ವಜಾರೋಹಣದ ನಂತರ ಪೊಲೀಸ್ ಕವಾಯತ್ ಮೈದಾನದಲ್ಲಿ ವಿವಿಧ ಶಾಲಾ ಕಾಲೇಜು ಮಕ್ಕಳಿಂದ ಮೂರು ಸಾಂಸ್ಕøತಿಕ ಕಾರ್ಯಕ್ರಮ ಜಿಲ್ಲಾ ಸಾಂಖ್ಯಿಕ ಇಲಾಖೆಯಿಂದ ಒಂದು ಸಂಸ್ಕøತಿಕ ಕಾರ್ಯಕ್ರಮ, ಸಮಾಜ ಕಲ್ಯಾಣ ಇಲಾಖೆಯಿಂದ ಅಂಧ ಮಕ್ಕಳಿಂದ ಒಂದು ಸಂಸ್ಕøತಿಕ ಕಾರ್ಯಕ್ರಮ ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಯಂಕಾಲ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಸಹಾಯಕ ಆಯುಕ್ತರಾದ ಮೊಹಮ್ಮದ ನಯೀಮ್ ಮೋಮಿನ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ವಿಜಯಕುಮಾರ ಮಡ್ಡೆ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.