ಆ.13ರ ಲೋಕ್ ಅದಾಲತ್ ನ ಸಂಪೂರ್ಣ ಪ್ರಯೋಜನ ಪಡೆಯಿರಿ

ಬೀದರ್: ಆ.6:ಸಾರ್ವಜನಿಕರು ಜಿಲ್ಲೆಯಲ್ಲಿ ಆಗಸ್ಟ್ 13 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚೇಗರೆಡ್ಡಿ ಮನವಿ ಮಾಡಿದರು.

ಕಳೆದ ಲೋಕ ಅದಾಲತನಲ್ಲಿ 7,054 ಪ್ರಕರಣಗಳನ್ನು ಗುರುತಿಸಲಾಗಿತ್ತು.

5,354 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿತ್ತು. ಈ ಬಾರಿ ಈಗಾಗಲೇ 8,795 ಪ್ರಕರಣಗಳನ್ನು ಗುರುತಿಸಲಾಗಿದೆ. 2,406ಕ್ಕೂ ಅಧಿಕ ವ್ಯಾಜ್ಯಪೂರ್ವ (ಬ್ಯಾಂಕ್ ವಸೂಲಾತಿ) ಪ್ರಕರಣಗಳನ್ನು ಗುರುತಿಸಲಾಗಿದ್ದು, ಮುಂದಿನ 8 ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಗುರುತಿಸಲಾಗುವುದು ಎಂದು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಲೋಕ ಅದಾಲ???ನಲ್ಲಿ ಭೂ ಸ್ವಾಧೀನದ 200 ಪ್ರಕರಣಗಳು ಇತ್ಯರ್ಥ ಆಗಬೇಕಾಗಿದೆ. ಪ್ರೀ ಲಿಟಿಗೇಷನ್ ಪ್ರಕರಣಗಳ ಸಂಖ್ಯೆ 1,000 ಆಗಬಹುದು. ಈಗಾಗಲೇ ನ್ಯಾಯಾಲಯದಲ್ಲಿ ವ್ಯಾಜ್ಯಪೂರ್ವ ಹಾಗೂ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳೂ ಇವೆ ಎಂದು ಹೇಳಿದರು.

ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ಕಾರ್ಮಿಕ ವಿವಾದ, ವಿದ್ಯುತ್ ಬಿಲ್, ನೀರಿನ ಶುಲ್ಕ ಹಾಗೂ ಇತರೆ ಪ್ರಕರಣಗಳು ಸೇರಿವೆ. ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣ, ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ಕಾರ್ಮಿಕ ವಿವಾದ, ಮೋಟಾರ್ ವಾಹನ ಅಪಘಾತಗಳಲ್ಲಿ ಗಾಯಗೊಂಡವರು ಅಥವಾ ಮೃತಪಟ್ಟವರ ವಾರಸುದಾರರು ಅಥವಾ ಅವಲಂಬಿತರು ಪರಿಹಾರ ಧನ ಕೋರಿ ಸಲ್ಲಿಸಲಾದ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕಗಳ ಪ್ರಕರಣ, ವೈವಾಹಿಕ ವಿವಾದ ಮತ್ತು ಜೀವನಾಂಶದ ಪ್ರಕರಣ, ಭೂ ಸ್ವಾಧೀನ ಸಂಬಂಧ ಸರ್ಕಾರದಿಂದ ಪರಿಹಾರ ಧನ ಕೋರಿ ಸಲ್ಲಿಸಲಾದ ಪ್ರಕರಣ, ಸರ್ವಿಸ್ ಮ್ಯಾಟರ್ಸ್ ರಿಲೆಟಿಂಗ್ ಟು ಪೇ ಆಯಂಡ್ ಅಲೋವೆನ್ಸ್ ಆಯಂಡ್ ರಿಟೇಲರ್ ಬೆನಿಫಿಟ್ಸ್, ಕಂದಾಯ ಪ್ರಕರಣ, ಇತರೆ ಸಿವಿಲ್ ಪ್ರಕರಣಗಳು ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳು ಸೇರಿವೆ ಎಂದು ಹೇಳಿದರು.

ಲೋಕ ಅದಾಲತ್ ಮೂಲಕ ಪ್ರಕರಣ ಅತ್ಯಂತ ಕಡಿಮೆ ಖರ್ಚಿನಲ್ಲಿ ಶೀಘ್ರ ಇತ್ಯರ್ಥಪಡಿಸಿಕೊಳ್ಳಬಹುದು. ಇಲ್ಲಿ ಯಾವುದೇ ನ್ಯಾಯಾಲಯ ಶುಲ್ಕ ಕೊಡಬೇಕಿಲ್ಲ. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಸಿವಿಲ್ ಪ್ರಕರಣ ಇತ್ಯರ್ಥಗೊಂಡರೆ ಅವಾರ್ಡ್ ಮಾಡಲಾಗುವುದು. ಅದು ಸಾಮಾನ್ಯ ಡಿಕ್ರಿಯಷ್ಟೇ ಮಹತ್ವ ಪಡೆದುಕೊಂಡಿರುತ್ತದೆ. ಪ್ರಕರಣ ರಾಜಿ ಮಾಡಿಕೊಂಡಲ್ಲಿ ಶೇಕಡ 100 ರಷ್ಟು ನ್ಯಾಯಾಲಯದ ಶುಲ್ಕ ವಾಪಸ್ ನೀಡಲಾಗುವುದು. ಲೋಕ ಅದಾಲತ್ ಅವಾರ್ಡ್ ವಿರುದ್ಧ ಮೇಲ್ಮನವಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಲೋಕ್ ಅದಾಲತ್ ಕುರಿತು ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಥವಾ ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು. ಬೀದರ್ ಕಚೇರಿ ದೂ.ಸಂಖ್ಯೆ 08482-226116, ಮೊಬೈಲ್ ಸಂಖ್ಯೆ 9844270305, 94481944121, ಔರಾದ್- 9731228169, ಬಸವಕಲ್ಯಾಣ- 9902213842, ಭಾಲ್ಕಿ- 9008070905 ಮತ್ತು ಹುಮನಾಬಾದ್- 9035342125 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕಲ್ಯಾಣರಾವ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ ಸುದ್ದಿಗೋಷ್ಠಿಯಲ್ಲಿ ಇದ್ದರು.