ಆ.13ರಿಂದ ಮನೆಮನೆಯಲ್ಲೂ ಧ್ವಜ ಅಭಿಯಾನ: ಡಾ.ವಿಜಯಮಹಾಂತೇಶ ದಾನಮ್ಮನವರ

ವಿಜಯಪುರ, ಜು.19-2022ರ ಆಗಷ್ಟ್ 13ರಿಂದ ಆಗಸ್ಟ್ 15ರವರೆಗೆ ವಿಜಯಪುರ ಜಿಲ್ಲೆಯ ಮನೆಮನೆಯಿಂದಲೂ ರಾಷ್ಟ್ರೀಯ ಧ್ವಜ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ 2022ರ ಆಗಷ್ಟ್ 13ರಿಂದ ಆಗಸ್ಟ್ 15ರವರೆಗೆ ದೇಶದ ಪ್ರತಿ ಮನೆಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶ ಭಕ್ತಿ, ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿ, ಹರ್ ಘರ್ ತಿರಂಗಾ- ಮನೆಮನೆಗೂ ರಾಷ್ಟ್ರೀಯಧ್ವಜ ಅಭಿಯಾನ ಹಮ್ಮಿಕೊಂಡಿದೆ. ಅದರಂತೆ ವಿಜಯಪುರ ಜಿಲ್ಲೆಯ ಜನರು, ಪ್ರತಿ ಮನೆಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ, ದೇಶಾಭಿಮಾನ ಬಿಂಬಿಸುವ ಮೂಲಕ ನಮ್ಮ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತಾಗಬೇಕು. ಹರ್ ಘರ್ ತಿರಂಗಾ ಅಭಿಯಾನದಲ್ಲಿ ವಿಜಯಪುರ ಜಿಲ್ಲೆಯ ಎಲ್ಲಾ ಪಂಚಾಯತ್ ಕಾರ್ಯ ವ್ಯಾಪ್ತಿಯಲ್ಲಿರುವ ಸರ್ಕಾರಿ, ಅರೆ ಸರ್ಕಾರಿ, ನಿಗಮ ಮಂಡಳಿಗಳು, ಸಾರ್ವಜನಿಕ ಉದ್ಯಮಗಳು, ಸ್ವಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಸಾರ್ವಜನಿಕರು, ಶಾಲಾ- ಕಾಲೇಜು ಮಕ್ಕಳು ಇತರೆ ಎಲ್ಲ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಪಾಲ್ಗೊಳ್ಳಬೇಕೆಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಧ್ವಜ ಮಾಹಿತಿ: ಗೃಹ ವ್ಯವಹಾರಗಳ ಮಂತ್ರಾಲಯ ದಿ ಪ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 (ಆಸ್ ಅಮೆಂಡೆಡ್ ಇನ್-2021) ತಿದ್ದುಪಡಿಯನ್ನು ತರಲಾಗಿ ಕೈಯಲ್ಲಿ ತಯಾರಿಸಿದ ರಾಷ್ಟ್ರೀಯಧ್ವಜ, ಯಂತ್ರದಿಂದ ತಯಾರಿಸಿದ ಪಾಲಿಸ್ಟರ್, ಹತ್ತಿ, ಉಣ್ಣೆ, ರೇಷ್ಮೆ ಖಾದಿ ಬಟ್ಟೆಯಿಂದ ತಯಾರಿಸುವ ರಾಷ್ಟ್ರೀಯ ಧ್ವಜವನ್ನು ಹಾರಿಸಬಹುದಾಗಿದೆ. ರಾಷ್ಟ್ರಧ್ವಜದ ಅಳತೆಯು 20*30 ಅಥವಾ ಈ ಅಳತೆಯ ಅರ್ಧದಷ್ಟದಾರೂ ಆಗಿರಬಹುದು.
ಲೋಪದೋಷವಿಲ್ಲದೇ ಹಾರಿಸಿ: ಪ್ರತಿಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಕಚೇರಿಗಳನ್ನು ಹಾಗೂ ನ್ಯಾಯಬೆಲೆ ಅಂಗಡಿಗಳನ್ನು ರಾಷ್ಟ್ರಧ್ವಜಗಳ ಮಾರಾಟ ಕೇಂದ್ರಗಳನ್ನಾಗಿ ಗುರುತಿಸಿ ಹಂಚಿಕೆ ಮಾಡಿ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗುತ್ತದೆ. ಸರ್ಕಾರ ನಿಗಧಿಪಡಿಸಿರುವ ದರದಲ್ಲಿ ಧ್ವಜಗಳನ್ನು ಖರೀದಿಸಿ ತಮ್ಮ ತಮ್ಮ ಮನೆಯ ಅಂಗಳದಲ್ಲಿ 2022 ಆಗಷ್ಟ್ 13 ರಿಂದ 15 ರವರೆಗೆ ರಾಷ್ಟ್ರಧ್ವಜವನ್ನು ಗೃಹ ವ್ಯವಹಾರಗಳ ಮಂತ್ರಾಲಯ ದಿ ಪ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 (ಆಸ್ ಅಮೆಂಡೆಡ್ ಇನ್-2021) ತಿದ್ದುಪಡಿಯಂತೆ ಯಾವುದೇ ಲೋಪದೋಷವಿಲ್ಲದೇ ಹಾರಿಸಿ ದೇಶಭಕ್ತಿ, ದೇಶಾಭಿಮಾನವನ್ನು ಮತ್ತು ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಮೃತ ಮಹೋತ್ಸವ ಹಿನ್ನೆಲೆ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯ ಹಿನ್ನೆಲೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನೆನಪುಗಳನ್ನು ಇತ್ತೀಚಿನ ಯುವಪೀಳಿಗೆಗೆ ಮತ್ತು ಎಲ್ಲಾ ಭಾರತಿಯರಿಗೂ ಈ ಬಗ್ಗೆ ತಿಳಿಸಿಕೊಡುವುದು ಅಗತ್ಯವಾಗಿದೆ. ದೇಶಾದ್ಯಂತ ಸ್ವಾತಂತ್ರ್ಯದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಮತ್ತು ವರ್ಣರಂಜಿತವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.